ಭಾರತ-ಪಾಕ್ ಮೇಲೆ ಅಮೆರಿಕ ಪ್ರತಿದಿನವೂ ಕಣ್ಣಿಟ್ಟಿದೆ : ಮಾರ್ಕೊ ರುಬಿಯೊ
ಮಾರ್ಕೊ ರುಬಿಯೊ | Credit : AP
ವಾಶಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಬಹುಬೇಗ ಮುರಿದು ಬೀಳುವ ಸಾಧ್ಯತೆ ಇರುವುದರಿಂದ, ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಏನಾಗುತ್ತಿದೆ ಎಂಬುದರ ಬಗ್ಗೆ ಅಮೆರಿಕ ನಿಗಾ ವಹಿಸಲಿದೆ ಎಂದು ಅಮೆರಿಕ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
ಎನ್‌ಬಿಸಿ ನ್ಯೂಸ್ ಹಮ್ಮಿಕೊಂಡಿದ್ದ ಮಾಧ್ಯಮಗಳ ಭೇಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಮಾರ್ಕೊ ರುಬಿಯೊ, “ಕದನ ವಿರಾಮ ಬಹುಬೇಗ ಮುರಿದು ಬೀಳುವ ಸಾಧ್ಯತೆ ಇದೆ. ವಿಶೇಷವಾಗಿ ಮೂರೂವರೆ ವರ್ಷಗಳಿಂದ ನಡೆಯುತ್ತಿರುವ ರಶ್ಯ-ಉಕ್ರೇನ್ ಕದನ ನೋಡಿದಾಗ, ನಾವು ಶಾಶ್ವತ ಕದನ ವಿರಾಮಕ್ಕೆ ಪ್ರಯತ್ನಿಸುತ್ತಿಲ್ಲ ಎಂಬುದನ್ನು ಯಾರೂ ತಳ್ಳಿ ಹಾಕುವುದಿಲ್ಲ ಎಂದು ಭಾವಿಸಿದ್ದೇನೆ. ನಾವು ಯುದ್ಧವಿಲ್ಲದ ಶಾಂತಿಯನ್ನು ಗುರಿಯಾಗಿಸಿಕೊಂಡಿದ್ದೇವೆ ಹಾಗೂ ಭವಿಷ್ಯದಲ್ಲಿ ಯುದ್ಧವಿಲ್ಲದಂತೆ ಮಾಡುವುದನ್ನು ಗುರಿಯಾಗಿಸಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಮೇ 10ರಿಂದ ಇಲ್ಲಿಯವರೆಗೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಿಲ್ಲಿಸಿದ್ದು ನಾನೇ ಎಂದು 40 ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿರುವ ಬೆನ್ನಿಗೇ, ಮಾರ್ಕೊ ರುಬಿಯೊರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಆದರೆ, ಸಂಸತ್ತಿನಲ್ಲಿ ಡೊನಾಲ್ಡ್ ಟ್ರಂಪ್ ಪ್ರತಿಪಾದನೆಯನ್ನು ಅಲ್ಲಗಳೆದಿದ್ದ ಪ್ರಧಾನಿ ನರೇಂದ್ರ ಮೋದಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಯಾವುದೇ ಜಾಗತಿಕ ನಾಯಕನೂ ಭಾರತಕ್ಕೆ ಸೂಚಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಡೊನಾಲ್ಡ್ ಟ್ರಂಪ್ ಪ್ರತಿಪಾದನೆಯನ್ನು ಸಾರಾಸಗಟಾಗಿ ಅಲ್ಲಗಳೆದಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕೂಡಾ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಯಾವುದೇ ಮೂರನೆಯ ವ್ಯಕ್ತಿ ಕದನ ವಿರಾಮಕ್ಕಾಗಿ ಭಾರತಕ್ಕೆ ಸೂಚಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ನಡುವೆ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರೊಂದಿಗೆ ನಡೆದ ಶೃಂಗ ಸಭೆಯ ವೇಳೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವೇರ್ಪಡಲು ನಾನು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಹಲವು ಬಾರಿ ಪುನರುಚ್ಚರಿಸಿದ್ದರು.