×
Ad

ತಂದೆ ವಿದ್ವಾಂಸ, ತಾಯಿ ಚಿತ್ರ ನಿರ್ದೇಶಕಿ; ನ್ಯೂಯಾರ್ಕ್ ನೂತನ ಮೇಯರ್ ಝೋಹ್ರಾನ್ ಮಮ್ದಾನಿ ಪೋಷಕರ ಕುರಿತ ಮಾಹಿತಿ ಇಲ್ಲಿದೆ...

Update: 2025-11-05 12:11 IST

ಪೋಷಕರೊಂದಿಗೆ ನ್ಯೂಯಾರ್ಕ್ ನೂತನ ಮೇಯರ್ ಝೋಹ್ರಾನ್ ಮಮ್ದಾನಿ (Source: Instagram / @pagliji)

ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಗೆ ಆಯ್ಕೆಯಾದ ಝೋಹ್ರಾನ್ ಮಮ್ದಾನಿ ಅವರ ಜೀವನ ಮತ್ತು ರಾಜಕೀಯ ನಿಲುವುಗಳ ಹಿಂದೆ ಅವರ ಭಾರತೀಯ ಮೂಲದ ಪೋಷಕರ ಪ್ರಭಾವ ಗಾಢವಾಗಿದೆ. ತಂದೆ, ವಿದ್ವಾಂಸ ಮಹಮೂದ್ ಮಮ್ದಾನಿ ಹಾಗು ತಾಯಿ, ಖ್ಯಾತ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರು ಝೋಹ್ರಾನ್ ಮಮ್ದಾನಿ ಅವರ ರಾಜಕೀಯ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಕ್ರಿಯಾಶೀಲತೆ, ಕಲೆ ಮತ್ತು ಶಿಕ್ಷಣದ ಮೌಲ್ಯಗಳಲ್ಲಿ ಬೇರೂರಿದ ಈ ದಂಪತಿ, ತಮ್ಮ ಮಗನ ಜೀವನದ ದಿಕ್ಕನ್ನು ಬಾಲ್ಯದಲ್ಲೇ ರೂಪಿಸಿದ್ದರು.

1991ರಲ್ಲಿ ಉಗಾಂಡಾದ ಕಂಪಾಲಾದಲ್ಲಿ ಜನಿಸಿದ ಝೋಹ್ರಾನ್, ಬಾಲ್ಯದಿಂದಲೇ ಕಲೆ, ಸಾಮಾಜಿಕ ಜಾಗೃತಿ ಮತ್ತು ಕ್ರಿಯಾಶೀಲತೆಯ ವಾತಾವರಣದಲ್ಲಿ ಬೆಳೆದರು. ತಂದೆ ಮಹಮೂದ್ ಮಮ್ದಾನಿ ಮಕೆರೆರೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರೆ, ತಾಯಿ ಮೀರಾ ನಾಯರ್ ತಮ್ಮ ಮೊದಲ ಚಿತ್ರ ಸಲಾಮ್ ಬಾಂಬೆ (1988) ಮೂಲಕ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಈ ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿಯ ನಾಮನಿರ್ದೇಶನ ಕೂಡ ಲಭಿಸಿತ್ತು.

1980ರ ದಶಕದ ಕೊನೆಯಲ್ಲಿ ಉಗಾಂಡಾದಲ್ಲಿ ಭೇಟಿಯಾದ ಈ ದಂಪತಿ ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ತಮ್ಮ ನಿಲುವುಗಳಿಂದ ಹತ್ತಿರವಾದರು. ನಂತರ ಅವರು ಉಗಾಂಡಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವಾಸವಿದ್ದು, 1999ರಲ್ಲಿ ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡರು.

ತಮ್ಮ ಬಾಲ್ಯವನ್ನು ಉಲ್ಲೇಖಿಸಿದ ಝೋಹ್ರಾನ್, “ನಾನು ಎಂದಿಗೂ ಏನನ್ನೂ ಕೇಳಬೇಕಾಗಿರಲಿಲ್ಲ. ನನಗದು ಕೈಗೆಟುಕುತ್ತಿತ್ತು. ಆದರೆ ನ್ಯೂಯಾರ್ಕ್‌ನ ಬಹುತೇಕ ಜನರಿಗೆ ಅದು ವಾಸ್ತವವಲ್ಲ ಎಂಬ ಅರಿವು ನನ್ನಲ್ಲಿ ಇತ್ತು,” ಎಂದು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಮೀರಾ ನಾಯರ್ ಮತ್ತು ಮಹಮೂದ್ ಮಮ್ದಾನಿ ಇಬ್ಬರೂ ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತಿದ ಕ್ರಿಯಾಶೀಲರು. ಝೋಹ್ರಾನ್ ತಮ್ಮ ಬಾಲ್ಯದಲ್ಲಿ ಪೋಷಕರೊಂದಿಗೆ ಪ್ರತಿಭಟನೆಗಳು ಮತ್ತು ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದರು. “ನನ್ನ ವಾರಾಂತ್ಯಗಳು ರ್ಯಾಲಿಗಳಲ್ಲೇ ಕಳೆದವು,” ಎಂದು ಝೋಹ್ರಾನ್ ಹಾಸ್ಯಾತ್ಮಕವಾಗಿ ಸಿಟಿ & ಸ್ಟೇಟ್ ಪತ್ರಿಕೆಗೆ ಹೇಳಿದ್ದಾರೆ.

ಮೀರಾ ನಾಯರ್ ಅವರ ಮಿಸ್ಸಿಸ್ಸಿಪ್ಪಿ ಮಸಾಲಾ, ಮಾನ್ಸೂನ್ ವೆಡ್ಡಿಂಗ್, ದಿ ನೇಮ್‌ಸೇಕ್, ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ ಮುಂತಾದ ಚಲನಚಿತ್ರಗಳು ವಲಸೆ, ಸಾಮಾಜಿಕ ಅಸಮಾನತೆಗಳ ಕುರಿತು ಅವರ ಏಕೈಕ ಪುತ್ರ ಝೋಹ್ರಾನ್ ಮನಸ್ಸಿನಲ್ಲಿ ಆಳವಾದ ಚಿಂತನೆಗಳನ್ನು ಮೂಡಿಸಿದವು. ಆ ಮೂಲಕ ಬಹಳಷ್ಟು ಪ್ರಭಾವ ಬೀರಿದವು.

ಹಾರ್ವರ್ಡ್ ನಿಂದ ಪಿಎಚ್‌ಡಿ ಪದವೀಧರರಾದ ಮಹಮೂದ್ ಮಮ್ದಾನಿ, ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದು, ವಸಾಹತುಶಾಹಿ ಮತ್ತು ಆಫ್ರಿಕನ್ ಅಧ್ಯಯನಗಳ ಪ್ರಮುಖ ವಿದ್ವಾಂಸರಾಗಿದ್ದಾರೆ. ಅವರ Good Muslim, Bad Muslim ಮುಂತಾದ ಕೃತಿಗಳು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿವೆ. ಫೆಲೆಸ್ತೀನಿನ ಹಕ್ಕುಗಳ ಪರವಾಗಿ ಧೈರ್ಯವಾಗಿ ಮಾತನಾಡಿರುವ ಅವರು, ತಮ್ಮ ಚಿಂತನೆಗಳಿಂದ ವಿಶ್ವವಿದ್ಯಾಲಯ ವಲಯದಲ್ಲಿ ಗೌರವ ಪಡೆದಿದ್ದಾರೆ. ಇದೆಲ್ಲವೂ ಝೋಹ್ರಾನ್ ಅವರ ರಾಜಕೀಯ ಚಿಂತನೆಗಳ ಮೇಲೆ ಪ್ರತಿಫಲನವಾದವು.

ಮೀರಾ ನಾಯರ್ ಅವರ ಕಲೆಯಲ್ಲೂ ಕುಟುಂಬದ ಅನುಭವಗಳ ಪ್ರಭಾವ ಸ್ಪಷ್ಟ. ʼಮಿಸ್ಸಿಸ್ಸಿಪ್ಪಿ ಮಸಾಲಾʼ ಅವರದೇ ಜೀವನದ ಕೆಲವು ಅಂಶಗಳಿಂದ ಪ್ರೇರಿತವಾಗಿದ್ದು, ʼದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ʼ 9/11 ಬಳಿಕದ ಅಮೆರಿಕಾದ ಅನುಭವಗಳ ಸೃಜನಾತ್ಮಕ ಪ್ರತಿಕ್ರಿಯೆಯಾಗಿತ್ತು.

ತಾಯಿ ಕಲಿಸಿದ ಕಲಾತ್ಮಕ ಅಭಿವ್ಯಕ್ತಿ ಮತ್ತು ತಂದೆಯಿಂದ ಪಡೆದ ತಾತ್ವಿಕ ದೃಢತೆಯ ಸಂಯೋಜನೆಯೇ ಝೋಹ್ರಾನ್‌ನ ರಾಜಕೀಯದ ಮೂಲ. “ನಾವು ನಮ್ಮ ಕಥೆಗಳನ್ನು ಹೇಳದಿದ್ದರೆ ಯಾರೂ ಹೇಳುವುದಿಲ್ಲ” ಎಂಬ ತಾಯಿಯ ಮಾತನ್ನು ಅವರು ತಮ್ಮ ಜೀವನದ ಮಾರ್ಗದರ್ಶಕವನ್ನಾಗಿ ಮಾಡಿಕೊಂಡಿದ್ದಾರೆ.

ನ್ಯೂಯಾರ್ಕ್ ನ ಮೇಯರ್ ಆಗಿ ಆಯ್ಕೆಯಾದ ನಂತರ ಝೋಹ್ರಾನ್ ಮಮ್ದಾನಿ, “ನನ್ನ ಹೆತ್ತವರ ಸಾಧನೆಗಳು ನನಗೆ ಸಿಗದಿದ್ದರೆ ನ್ಯೂಯಾರ್ಕ್‌ನ ಬಹುತೇಕ ಜನರಿಗೆ ಅದು ಸಿಗದಿರುತ್ತದೆ ಎಂಬ ಅರಿವು ನನಗಿದೆ. ಎಲ್ಲರಿಗೂ ಸಮಾನ ಅವಕಾಶ ದೊರೆಯುವ ನಗರ ನಿರ್ಮಾಣವೇ ನನ್ನ ಉದ್ದೇಶ", ಎಂದು ತಮ್ಮ ಮುಂದಿನ ನಡೆಯ ಬಗ್ಗೆ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News