ಗಾಝಾ ಯುದ್ಧ ನಿಲ್ಲಿಸಲು ನೆರವಾಗಲು ಟ್ರಂಪ್ ಗೆ ಇಸ್ರೇಲ್ ನ ಮಾಜಿ ಭದ್ರತಾ ಅಧಿಕಾರಿಗಳ ಆಗ್ರಹ
ಜೆರುಸಲೇಂ, ಆ.4: ಗಾಝಾದಲ್ಲಿನ ಯುದ್ಧವನ್ನು ಕೊನೆಗೊಳಿಸುವಂತೆ ಇಸ್ರೇಲ್ ಸರಕಾರದ ಮೇಲೆ ಒತ್ತಡ ಹೇರುವಂತೆ ಇಸ್ರೇಲ್ ನ ನಿವೃತ್ತ ಭದ್ರತಾ ಅಧಿಕಾರಿಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಆಗ್ರಹಿಸಿದ್ದಾರೆ.
550 ಪ್ರಮುಖರು ಸಹಿ ಹಾಕಿರುವ ಪತ್ರದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕದನ ವಿರಾಮದತ್ತ `ತಿರುಗಿಸುವಂತೆ' ಟ್ರಂಪ್ ರನ್ನು ಒತ್ತಾಯಿಸಲಾಗಿದೆ.
ಹಮಾಸ್ ಇನ್ನು ಮುಂದೆ ಇಸ್ರೇಲ್‍ಗೆ ಕಾರ್ಯತಂತ್ರದ ಬೆದರಿಕೆಯನ್ನು ಒಡ್ಡುವುದಿಲ್ಲ ಎಂಬುದು ನಮ್ಮ ವೃತ್ತಿಪರ ಅನುಭವದ ಗ್ರಹಿಕೆಯಾಗಿದೆ. ಮೊದಲಿಗೆ ಇದು ಕೇವಲ ಒಂದು ಯುದ್ಧವಾಗಿತ್ತು, ನಮ್ಮ ರಕ್ಷಣೆಗಾಗಿ ನಡೆಸುವ ಯುದ್ಧ. ಆದರೆ ಯಾವತ್ತು ನಾವು ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಸಾಧಿಸಿದೆವೋ ಆ ಬಳಿಕ ಇದು ಕೇವಲ ಯುದ್ಧವಾಗಿ ಉಳಿದಿಲ್ಲ' ಎಂದವರು ಟ್ರಂಪ್ ಗೆ ಬರೆದಿರುವ, ಮಾಧ್ಯಮಗಳ ಜೊತೆ ಸೋಮವಾರ ಹಂಚಿಕೊಂಡ ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈಗ 23ನೇ ತಿಂಗಳನ್ನು ಸಮೀಪಿಸುತ್ತಿರುವ ಯುದ್ಧವು ತನ್ನ ಭದ್ರತೆ ಮತ್ತು ಅಸ್ಮಿತೆಯನ್ನು ಕಳೆದುಕೊಳ್ಳುವತ್ತ ಇಸ್ರೇಲ್ ರಾಷ್ಟ್ರವನ್ನು ಮುನ್ನಡೆಸುತ್ತಿದೆ ಎಂದು ಇಸ್ರೇಲ್ ನ ಆಂತರಿಕ ಭದ್ರತಾ ಏಜೆನ್ಸಿ `ಶಿನ್ ಬೆಟ್'ನ ಮಾಜಿ ನಿರ್ದೇಶಕ ಆಮಿ ಅಯಾಲನ್ ಪತ್ರದ ಜೊತೆಗೆ ಪೋಸ್ಟ್ ಮಾಡಿರುವ ವೀಡಿಯೊ ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ನ ಗುಪ್ತಚರ ಏಜೆನ್ಸಿ ಮೊಸ್ಸಾದ್‍ನ ಮೂವರು ಮಾಜಿ ಮುಖ್ಯಸ್ಥರಾ ತಮಿರ್ ಪಾರ್ದೊ, ಎಫ್ರಾಮ್ ಹಲೆವಿ ಮತ್ತು ಡ್ಯಾನಿ ಯಾಟೊಮ್, ಶಿನ್ ಬೆಟ್ ನ ಐವರು ಮಾಜಿ ಮುಖ್ಯಸ್ಥರು, ಮೂವರು ಮಾಜಿ ಸೇನಾ ಮುಖ್ಯಸ್ಥರು, ಮಾಜಿ ಪ್ರಧಾನಿ ಎಹುದ್ ಬರಾಕ್, ಮಾಜಿ ರಕ್ಷಣಾ ಸಚಿವ ಮೊಷೆ ಯಾಲಾನ್ ಸೇರಿದಂತೆ ನೂರಕ್ಕೂ ಅಧಿಕ ಪ್ರಮುಖರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಬಲದಿಂದ ಸಾಧಿಸಬಹುದಾದ ಎರಡು ಉದ್ದೇಶಗಳನ್ನು ಕೆಲ ಸಮಯದ ಹಿಂದೆಯೇ ಇಸ್ರೇಲ್ ಮಿಲಿಟರಿ ಸಾಧಿಸಿದೆ (ಹಮಾಸ್ ನ ಮಿಲಿಟರಿ ವ್ಯವಸ್ಥೆ ಮತ್ತು ಆಡಳಿತವನ್ನು ಕಿತ್ತು ಹಾಕುವುದು). ಮೂರನೆಯದು ಮತ್ತು ಅತ್ಯಂತ ಮಹತ್ವದ್ದನ್ನು (ಎಲ್ಲಾ ಒತ್ತೆಯಾಳುಗಳನ್ನೂ ಸ್ವದೇಶಕ್ಕೆ ಕರೆತರುವುದು) ಒಪ್ಪಂದದಿಂದ ಮಾತ್ರ ಸಾಧಿಸಬಹುದಾಗಿದೆ. ಉಳಿದಿರುವ ಹಮಾಸ್ ನ ಹಿರಿಯ ಕಾರ್ಯಕರ್ತರನ್ನು ಬೆನ್ನಟ್ಟುವ ಕಾರ್ಯವನ್ನು ನಂತರದ ದಿನಗಳಲ್ಲಿ ಮಾಡಬಹುದಾಗಿದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.
ಬಹುತೇಕ ಇಸ್ರೇಲಿಯನ್ನರು ಟ್ರಂಪ್ ಮೇಲೆ ವಿಶ್ವಾಸ ಇರಿಸಿರುವುದರಿಂದ ಅವರು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವಂತೆ ಮತ್ತು ಯುದ್ಧವನ್ನು ಕೊನೆಗೊಳಿಸುವಂತೆ ನೆತನ್ಯಾಹು ಮೇಲೆ ಒತ್ತಡ ಹೇರಬಹುದು. ಕದನ ವಿರಾಮದ ಬಳಿಕ ಗಾಝಾದಲ್ಲಿ ಹಮಾಸ್ ಆಡಳಿತಕ್ಕೆ ಪರ್ಯಾಯವಾಗಿ ಗಾಝಾದ ಉಸ್ತುವಾರಿ ವಹಿಸಿಕೊಳ್ಳುವ ಸುಧಾರಿತ ಫೆಲೆಸ್ತೀನ್ ಪ್ರಾಧಿಕಾರ(ಪಿಎ)ವನ್ನು ಬೆಂಬಲಿಸಲು ಪ್ರಾದೇಶಿಕ ಒಕ್ಕೂಟವನ್ನು ರಚಿಸಬಹುದು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.