ಆಂತರಿಕ ಸಚಿವಾಲಯದ ಎಚ್ಚರಿಕೆ ಬೆನ್ನಲ್ಲೇ ಬಹರೈನ್ನಲ್ಲಿ ಸ್ಫೋಟದ ಸದ್ದು: ಅಮೆರಿಕದ ರೇಡಾರ್ ವ್ಯವಸ್ಥೆಯನ್ನು ಗುರಿಯಾಗಿಸಿರುವುದಾಗಿ ಐಆರ್ಜಿಸಿ ಹೇಳಿಕೆ
Photo Credit : X
ಬಹರೈನ್: ಸ್ಥಳೀಯ ಆಂತರಿಕ ಸಚಿವಾಲಯವು ಮಂಗಳವಾರ ಭದ್ರತಾ ಎಚ್ಚರಿಕೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಬಹರೈನ್ನಲ್ಲಿ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಬಹರೈನ್ನ ಶೇಖ್ ಇಸಾ ವಾಯುನೆಲೆಯಲ್ಲಿ ಅಮೆರಿಕದ ರೇಡಾರ್ ವ್ಯವಸ್ಥೆಯನ್ನು ನಿಖರ ದಾಳಿಯ ಮೂಲಕ ಗುರಿಯಾಗಿಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಹೇಳಿಕೊಂಡಿದೆ.
ಇದಕ್ಕೂ ಕೆಲವೇ ಗಂಟೆಗಳ ಮೊದಲು ಇರಾನ್ ಸಂಘರ್ಷದಲ್ಲಿ ಹೊಸ ನಿಯಮವೊಂದನ್ನು ಘೋಷಿಸಿದ್ದು, ಇರಾನ್ನ ನಾಗರಿಕ ಮೂಲಸೌಕರ್ಯಗಳನ್ನು ಅಮೆರಿಕ ಅಥವಾ ಇಸ್ರೇಲ್ ಗುರಿಯಾಗಿಸಿದರೆ, ಆ ದೇಶಗಳ ಸೇನಾ ನೆಲೆಗಳ ಸಮೀಪವಿರುವ ನಾಗರಿಕ ಮೂಲಸೌಕರ್ಯಗಳ ಮೇಲೂ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಸಿತ್ತು.
ಇರಾನ್ನ ಸಂಸತ್ ಸ್ಪೀಕರ್ ಹಾಗೂ ಅಮೆರಿಕದೊಂದಿಗಿನ ಮಾತುಕತೆಯಲ್ಲಿ ಪ್ರಮುಖ ಸಂಧಾನಕಾರರಾಗಿರುವ ಮಹಮ್ಮದ್ ಬಾಘರ್ ಗಾಲಿಬಫ್ ಮಂಗಳವಾರ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಇರಾನ್ನ ಕ್ಷಿಪಣಿ ನೆಲೆಗಳ ಸಮೀಪವಿರುವ ಅಣೆಕಟ್ಟುಗಳು ದ್ವಿ-ಬಳಕೆಯ ಮೂಲಸೌಕರ್ಯಗಳಾಗಿವೆ ಎಂದು ಅಮೆರಿಕದ ತಜ್ಞರು ನ್ಯೂಯಾರ್ಕ್ ಟೈಮ್ಸ್ಗೆ ಹೇಳುತ್ತಿದ್ದಾರೆ. ಹಾಗಾದರೆ, ಅಮೆರಿಕ ಅಥವಾ ಇಸ್ರೇಲ್ನ ಸೇನಾ ನೆಲೆಗಳ ಸಮೀಪವಿರುವ ಯಾವುದೇ ಅಣೆಕಟ್ಟು, ಬಂದರು ಅಥವಾ ವಿದ್ಯುತ್ ಸ್ಥಾವರವನ್ನೂ ದ್ವಿ-ಬಳಕೆಯ ಮೂಲಸೌಕರ್ಯವೆಂದು ಪರಿಗಣಿಸಬೇಕಾಗುತ್ತದೆ. ನಿಮ್ಮ ತರ್ಕವನ್ನೇ ಎಲ್ಲರಿಗೂ ಸಮಾನವಾಗಿ ಅನ್ವಯಿಸೋಣ ಎಂದು ಅವರು ಹೇಳಿದ್ದಾರೆ.
ಅಂದರೆ, ಅಣೆಕಟ್ಟುಗಳು ಕೇವಲ ನಾಗರಿಕರ ನೀರಿನ ಅಗತ್ಯಕ್ಕೆ ಮಾತ್ರವಲ್ಲದೆ, ಸೇನಾ ಉದ್ದೇಶಗಳಿಗೂ ಬಳಕೆಯಾಗಬಹುದು ಎಂಬ ಕಾರಣ ನೀಡಿ ಅವುಗಳನ್ನು ದ್ವಿ-ಬಳಕೆಯ ಮೂಲಸೌಕರ್ಯವೆಂದು ಪರಿಗಣಿಸಲಾಗುತ್ತಿದೆ. ಇದೇ ತರ್ಕವನ್ನು ಅಮೆರಿಕ ಮತ್ತು ಇಸ್ರೇಲ್ಗೂ ಅನ್ವಯಿಸಬೇಕು ಎಂಬುದು ಗಾಲಿಬಫ್ ಅವರು ಹೇಳಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ, ಇರಾನ್ನ ಹಲವು ಜಲ ಮೂಲಸೌಕರ್ಯ ಯೋಜನೆಗಳನ್ನು ದೇಶದ ಸೇನಾ ಸಾಮರ್ಥ್ಯ ವೃದ್ಧಿಗೆ ಪೂರಕವಾಗಿ ಅಭಿವೃದ್ಧಿಪಡಿಸಿರಬಹುದು ಎಂದು ಹೇಳಲಾಗಿತ್ತು. ಯುದ್ಧ ಆರಂಭವಾದಾಗಿನಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದ್ಯುತ್ ಸ್ಥಾವರಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ.
ಇರಾನ್ ವಾಯುಪ್ರದೇಶದಲ್ಲಿ ಅಮೆರಿಕದ ಸೇನಾ ಡ್ರೋನ್ಗಳು ನಿರಂತರವಾಗಿ ಅತಿಕ್ರಮಣ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಬಹರೈನ್ನ ಶೇಖ್ ಇಸಾ ವಾಯುನೆಲೆಯಲ್ಲಿರುವ ಅಮೆರಿಕದ ರೇಡಾರ್ ವ್ಯವಸ್ಥೆಯನ್ನು ಗುರಿಯಾಗಿಸಲಾಗಿದೆ ಎಂದು ಐಆರ್ಜಿಸಿ ಹೇಳಿದೆ.
“ಇಂದು ಬೆಳಿಗ್ಗೆ ರೆವಲ್ಯೂಷನರಿ ಗಾರ್ಡ್ಗೆ ಸೇರಿದ ಯುದ್ಧ ಡ್ರೋನ್ಗಳು ಬಹರೈನ್ನ ಶೇಖ್ ಇಸಾ ವಾಯುನೆಲೆಯಲ್ಲಿರುವ ಅಮೆರಿಕ ಸೇನೆ ನಿರ್ವಹಿಸುವ ರೇಡಾರ್ ವ್ಯವಸ್ಥೆಯನ್ನು ನಿಖರ ದಾಳಿಯ ಮೂಲಕ ಗುರಿಯಾಗಿಸಿಕೊಂಡಿವೆ. ಅಮೆರಿಕದ ಸೇನಾ ಡ್ರೋನ್ಗಳು ಇರಾನ್ ವಾಯುಪ್ರದೇಶವನ್ನು ಪದೇಪದೆ ಉಲ್ಲಂಘಿಸುತ್ತಿರುವುದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮೊದಲು ಬಹರೈನ್ನ ಆಂತರಿಕ ಸಚಿವಾಲಯವು ಸಂಭಾವ್ಯ ಅಪಾಯದ ಕುರಿತು ಎಕ್ಸ್ನಲ್ಲಿ ಎಚ್ಚರಿಕೆ ನೀಡಿತ್ತು. ಸಾರ್ವಜನಿಕರು ಆತಂಕಪಡದೆ ಶಾಂತವಾಗಿರುವಂತೆ ಮನವಿ ಮಾಡಿತ್ತು. ಬಳಿಕ ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ತಿಳಿಸಿ ಎಚ್ಚರಿಕೆಯನ್ನು ಹಿಂಪಡೆದಿತ್ತು.
‘ನಾಗರಿಕರು ಮತ್ತು ನಿವಾಸಿಗಳು ಶಾಂತವಾಗಿರಬೇಕು, ಸಮೀಪದ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಅಧಿಕೃತ ಮೂಲಗಳ ಮೂಲಕವೇ ಮಾಹಿತಿ ಪಡೆಯಬೇಕು’ ಎಂದು ಸಚಿವಾಲಯ ತಿಳಿಸಿತ್ತು.