×
Ad

ಗಾಝಾ ನಗರದಲ್ಲಿ ಬರಗಾಲ: ವಿಶ್ವಸಂಸ್ಥೆ ಘೋಷಣೆ

ಪಶ್ಚಿಮ ಏಶ್ಯಾದಲ್ಲಿ ಮೊದಲ ಬಾರಿಗೆ ಕ್ಷಾಮ ದೃಢಪಡಿಸಿದ ಐಪಿಸಿ

Update: 2025-08-22 21:41 IST

Photo credit: PTI

ವಿಶ್ವಸಂಸ್ಥೆ, ಆ.22: ವಿಶ್ವಸಂಸ್ಥೆಯು ಶುಕ್ರವಾರ ಅಧಿಕೃತವಾಗಿ ಗಾಝಾ ನಗರದಲ್ಲಿ ಬರಗಾಲವನ್ನು ಘೋಷಿಸಿದೆ. ಪಶ್ಚಿಮ ಏಶ್ಯಾದಲ್ಲಿ ಮೊದಲ ಬಾರಿಗೆ ಕ್ಷಾಮವನ್ನು ವಿಶ್ವಸಂಸ್ಥೆ ದೃಢಪಡಿಸಿದ್ದು ಗಾಝಾದಲ್ಲಿ 5 ಲಕ್ಷ ಜನರು `ದುರಂತ' ಹಸಿವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ತಜ್ಞರು ಹೇಳಿದ್ದಾರೆ.

ಗಾಝಾ ಪಟ್ಟಿಯ ಅತೀ ದೊಡ್ಡ ನಗರವು ಬರಗಾಲದ ಮುಷ್ಟಿಯಲ್ಲಿ ಸಿಲುಕಿದೆ. ಕದನ ವಿರಾಮ ಜಾರಿಗೊಳ್ಳದಿದ್ದರೆ ಮತ್ತು ಮಾನವೀಯ ನೆರವು ಪೂರೈಕೆಯ ಮೇಲಿನ ನಿರ್ಬಂಧ ತೆರವಾಗದಿದ್ದರೆ ಬರಗಾಲವು ಪ್ರದೇಶದಾದ್ಯಂತ ವ್ಯಾಪಿಸುವ ಸಾಧ್ಯತೆಯಿದೆ ಎಂದು `ದಿ ಇಂಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಷನ್(ಐಪಿಸಿ)' ವರದಿ ಮಾಡಿದೆ. ವಿಶ್ವಸಂಸ್ಥೆಯ ಏಜೆನ್ಸಿಯ ನೇತೃತ್ವದ ಐಪಿಸಿಯಲ್ಲಿ ಪ್ರಮುಖ ಸರ್ಕಾರೇತರ ಸಂಸ್ಥೆ(ಎನ್ಜಿಒ)ಗಳು ಸದಸ್ಯರಾಗಿವೆ. ಸಾವಿರಾರು ಫೆಲೆಸ್ತೀನೀಯರು ನೆಲೆಸಿರುವ ಗಾಝಾ ನಗರದಲ್ಲಿ ಬರಗಾಲ ಆವರಿಸಿದ್ದು ಮುಂದಿನ ತಿಂಗಳಾಂತ್ಯದೊಳಗೆ ದಕ್ಷಿಣದ ಡೀರ್ ಅಲ್-ಬಲಾಹ್ ಮತ್ತು ಖಾನ್ ಯೂನಿಸ್ ನಗರಗಳಿಗೆ ಹರಡಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಬರಗಾಲವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಆದರೆ ಇಸ್ರೇಲ್‌ ನ ವ್ಯವಸ್ಥಿತ ಅಡಚಣೆಯಿಂದಾಗಿ ಆಹಾರವನ್ನು ಫೆಲೆಸ್ತೀನಿಯನ್ ಪ್ರದೇಶಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆಯ ನೆರವು ಮುಖ್ಯಸ್ಥ ಟಾಮ್ ಫ್ಲೆಚರ್ ಹೇಳಿದ್ದಾರೆ. ಹೋರಾಟ, ವ್ಯಾಪಕ ಸ್ಥಳಾಂತರ, ಗಾಝಾದಲ್ಲಿ ಆಹಾರ ಉತ್ಪಾದನೆಯ ಕುಸಿತ ಮತ್ತು ನೆರವಿನ ದಿಗ್ಬಂಧನವು ಗಾಝಾದಲ್ಲಿ ಹಸಿವಿನ ಬಿಕ್ಕಟ್ಟನ್ನು ಹೆಚ್ಚಿಸಿದೆ. 22 ತಿಂಗಳ ಯುದ್ಧದ ಬಳಿಕ ಗಾಝಾದಲ್ಲಿ ಆಹಾರ ಕೊರತೆಯು ಮಾರಣಾಂತಿಕ ಮಟ್ಟಕ್ಕೆ ತಲುಪಿದೆ ಎಂದು ಐಪಿಸಿ ಹೇಳಿದೆ.

ಗಾಝಾದಲ್ಲಿ 5 ಲಕ್ಷಕ್ಕೂ ಅಧಿಕ ಜನರು, ಅಂದರೆ ಜನಸಂಖ್ಯೆಯ 25%ದಷ್ಟು, ಹಸಿವಿನ ದುರಂತ ಮಟ್ಟವನ್ನು ಎದುರಿಸುತ್ತಿದ್ದರೆ ಹಲವರು ಅಪೌಷ್ಟಿಕತೆಗೆ ಸಂಬಂಧಿಸಿದ ಸಮಸ್ಯೆಯಿಂದ ಸಾಯುವ ಅಪಾಯದಲ್ಲಿದ್ದಾರೆ ಎಂದು ಐಪಿಸಿ ಕಳವಳ ವ್ಯಕ್ತಪಡಿಸಿದೆ.

► ವಿಶ್ವಸಂಸ್ಥೆ ವರದಿ ನಿರಾಕರಿಸಿದ ಇಸ್ರೇಲ್

ಗಾಝಾದಲ್ಲಿ ಬರಗಾಲವಿದೆ ಎಂಬ ಐಪಿಸಿ ವರದಿಯನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ನಿರಾಕರಿಸಿದ್ದು, ಈ ಜನರು ಉಪವಾಸದಲ್ಲಿದ್ದಾರೆ ಎಂಬ ವರದಿಯು ಹಮಾಸ್ ನ ಸುಳ್ಳು ಪ್ರಚಾರದ ಫಲಶ್ರುತಿ ಎಂದು ಆರೋಪಿಸಿದ್ದಾರೆ.

ವರದಿ ಸುಳ್ಳು ಮತ್ತು ತಾರತಮ್ಯದಿಂದ ಕೂಡಿದೆ ಎಂದು ಗಾಝಾ ಪ್ರದೇಶಕ್ಕೆ ಸಹಾಯವನ್ನು ವರ್ಗಾಯಿಸುವ ಉಸ್ತುವಾರಿ ವಹಿಸಿರುವ ಇಸ್ರೇಲಿ ಮಿಲಿಟರಿಯ ಏಜೆನ್ಸಿ `ಕೊಗಾಟ್' ಪ್ರತಿಪಾದಿಸಿದ್ದು ಗಾಝಾದಲ್ಲಿ ಕ್ಷಾಮವಿದೆ ಎಂಬ ವರದಿಯನ್ನು ತಿರಸ್ಕರಿಸಿದ್ದು ಗಾಝಾಕ್ಕೆ ನೆರವಿನ ಪ್ರಮಾಣ ಹೆಚ್ಚಿಸಲು ಮಹತ್ವದ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದೆ.

ಕ್ಷಾಮವನ್ನು ನಿರ್ಧರಿಸುವ ರೀತಿ:

2011ರಲ್ಲಿ ಸೊಮಾಲಿಯಾದಲ್ಲಿ, 2017 ಮತ್ತು 2020ರಲ್ಲಿ ದಕ್ಷಿಣ ಸುಡಾನ್ ನಲ್ಲಿ ಹಾಗೂ 2024ರಲ್ಲಿ ಸುಡಾನ್ನ ಪಶ್ಚಿಮ ದಾರ್ಫುರ್ ಪ್ರದೇಶದಲ್ಲಿ ಬರಗಾಲವನ್ನು ಐಪಿಸಿ ಘೋಷಿಸಿದೆ. ಒಂದು ಪ್ರದೇಶದಲ್ಲಿ ಈ ಮೂರು ಪರಿಸ್ಥಿತಿಗಳು ದೃಢಪಟ್ಟರೆ ಬರಗಾಲವಿದೆ ಎಂದು ನಿರ್ಧರಿಸಲಾಗುತ್ತದೆ:

► ಕನಿಷ್ಠ 20%ದಷ್ಟು ಕುಟುಂಬಗಳು ಆಹಾರದ ತೀವ್ರ ಕೊರತೆಯನ್ನು ಹೊಂದಿದ್ದರೆ ಅಥವಾ ಉಪವಾಸ ಬೀಳುವ ಸ್ಥಿತಿ ತಲುಪಿದ್ದರೆ.

► 6 ತಿಂಗಳಿಂದ 5 ವರ್ಷದವರೆಗಿನ ಕನಿಷ್ಠ 30% ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ.

► ಹಸಿವಿನಿಂದ ಅಥವಾ ಅಪೌಷ್ಟಿಕತೆ ಮತ್ತು ರೋಗದ ಪರಸ್ಪರ ಕ್ರಿಯೆಯಿಂದಾಗಿ ಕನಿಷ್ಠ ಇಬ್ಬರು ಅಥವಾ ಐದು ವರ್ಷದೊಳಗಿನ ನಾಲ್ಕು ಮಕ್ಕಳು ಪ್ರತೀ ದಿನ ಸಾಯುತ್ತಿದ್ದರೆ, ಆ ಪ್ರದೇಶವನ್ನು ಬರಗಾಲ ಪೀಡಿತ ಪ್ರದೇಶವೆಂದು ನಿರ್ಧರಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News