ಕಳೆದ ವಾರ ಏನು ಕೆಲಸ ಮಾಡಿದ್ದೀರಿ? : 48 ಗಂಟೆಗಳಲ್ಲಿ ವಿವರಿಸುವಂತೆ ಅಮೆರಿಕದ ಸರಕಾರಿ ಉದ್ಯೋಗಿಗಳಿಗೆ ಸೂಚನೆ!
ಎಲಾನ್ ಮಸ್ಕ್ (PTI)
ವಾಶಿಂಗ್ಟನ್ : ಅಮೆರಿಕದಲ್ಲಿ ಎರಡನೇ ಬಾರಿಗೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ ಬೆನ್ನಲ್ಲೇ ಸರಕಾರಿ ಇಲಾಖೆಗಳಿಗೆ ಮೇಜರ್ ಸರ್ಜರಿ ಮಾಡುವ ಮೂಲಕ ಉದ್ಯೋಗ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮಧ್ಯೆ ಟ್ರಂಪ್ ಸರಕಾರದ ದಕ್ಷತೆ(DOGE) ಇಲಾಖೆಯ ಮುಖ್ಯಸ್ಥರಾದ ಎಲಾನ್ ಮಸ್ಕ್ ಅಮೆರಿಕದ ಲಕ್ಷಾಂತರ ಉದ್ಯೋಗಿಗಳಲ್ಲಿ ಕಳೆದ ವಾರದಲ್ಲಿ ಏನು ಕೆಲಸ ಮಾಡಿದ್ದೀರಿ ಎಂಬ ಬಗ್ಗೆ 48 ಗಂಟೆಗಳಲ್ಲಿ ವಿವರಿಸಬೇಕು ಎಂದು ಹೇಳಿದ್ದಾರೆ.
ವಿದೇಶಗಳಿಗೆ ಹರಿದು ಹೋಗುತ್ತಿರುವ ಅಮೆರಿಕದ ನಿಧಿಯನ್ನು ತಡೆದಿರುವ ಮಸ್ಕ್, ಇದೀಗ ಸರಕಾರಿ ಕೆಲಸಗಳಿಗೆ ವೇಗ ನೀಡಲು ಮುಂದಾಗಿದ್ದಾರೆ. ಅದರಂತೆ, ಸರಕಾರಿ ಉದ್ಯೋಗಿಗಳಿಗೆ ವಾರದ ಕೆಲಸದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಎಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ಅವರ ಸೂಚನೆಗಳಿಗೆ ಅನುಗುಣವಾಗಿ ಎಲ್ಲಾ ಸರಕಾರಿ ಉದ್ಯೋಗಿಗಳು ಕಳೆದ ವಾರ ತಾವು ಏನು ಕೆಲಸ ಮಾಡಿದ್ದೇವೆ ಎಂಬುದನ್ನು ತಿಳಿಸಲು ವಿನಂತಿಸುವ ಇಮೇಲ್ ಅನ್ನು ಶೀಘ್ರದಲ್ಲೇ ಸ್ವೀಕರಿಸಲಿದ್ದಾರೆ. ಇ-ಮೇಲ್‌ಗೆ ಪ್ರತಿಕ್ರಿಯಿಸಲು ವಿಫಲವಾದರೆ ರಾಜೀನಾಮೆಯಾಗಿ ಪರಿಗಣಿಸಲಾಗುವುದು ಎಂದು ಉಲ್ಲೇಖಿಸಿದ್ದರು.
ಇದರ ಬೆನ್ನಲ್ಲೇ ʼಅಮೆರಿಕದ ಸರಕಾರಿ ಉದ್ಯೋಗಿಗಳಿಗೆ ಸಿಬ್ಬಂದಿ ನಿರ್ವಹಣಾ ಕಚೇರಿಯಿಂದ ಇ-ಮೇಲ್ ಕಳುಹಿಸಲಾಗಿದೆ. ಅದರಲ್ಲಿ, ನೀವು ಕಳೆದ ವಾರ ಏನು ಮಾಡಿದ್ದೀರಿ ಎಂಬುದರ ಬಗ್ಗೆ ಸುಮಾರು 5 ಪಾಯಿಂಟ್‌ಗಳಲ್ಲಿ ಉತ್ತರಿಸಿ. ಇದನ್ನು ನಿಮ್ಮ ವ್ಯವಸ್ಥಾಪಕರಿಗೆ ಕಳುಹಿಸಿʼ ಎಂದು ಸೂಚಿಸಿದೆ. ಇ-ಮೇಲ್‌ಗೆ ಪ್ರತ್ಯುತ್ತರಿಸಲು ಸೋಮವಾರ ರಾತ್ರಿ 11:59ರವರೆಗೆ ಗಡುವು ನೀಡಲಾಗಿದೆ.
ಎಲಾನ್ ಮಸ್ಕ್ ಈ ಸೂಚನೆಗೆ ಭದ್ರತಾ ಇಲಾಖೆಗಳು, ರಾಷ್ಟ್ರೀಯ ಹವಾಮಾನ ಸೇವೆ ಇಲಾಖೆಗಳು ತಕ್ಷಣಕ್ಕೆ ಸ್ಪಂದಿಸಿಲ್ಲ. ಭದ್ರತೆಯ ಹಿತದೃಷ್ಟಿಯಿಂದ ಮತ್ತು ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ತಕ್ಷಣಕ್ಕೆ ಮಾಹಿತಿ ಹಂಚಿಕೊಳ್ಳಬೇಡಿ. ಮುಂದಿನ ನಿರ್ದೇಶನಗಳವೆರೆಗೆ ಕಾದು ನೋಡುವಂತೆ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.