×
Ad

ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ; 67 ಮಂದಿ ಜಲಸಮಾಧಿ

Update: 2025-07-07 07:36 IST

PC: x.com/WashTimes

ಕೆರ್ವಿಲ್ಲೆ, ಅಮೆರಿಕ: ಕೇಂದ್ರ ಟೆಕ್ಸಾಸ್ ಪ್ರದೇಶದಲ್ಲಿ ದಿಢೀರ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ರವಿವಾರ 67ಕ್ಕೇರಿದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತೊರೆಗಳಿಂದ ಮತ್ತಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಬೇಸಿಗೆ ಶಿಬಿರಕ್ಕೆ ಆಗಮಿಸಿದ್ದ 11 ಬಾಲಕಿಯರು ಸೇರಿದಂತೆ ಹಲವು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಶನಿವಾರ ಸಂಜೆಯಿಂದೀಚೆಗೆ ಕೆರ್ರ್ ಕೌಂಟಿ ಶೋಧತಜ್ಞರು 16 ಮೃತದೇಹಗಳನ್ನು ಪತ್ತೆಹಚ್ಚಿದ್ದು, ಅಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 59ಕ್ಕೇರಿದೆ ಎಂದು ಷೆರಿಫ್ ಲಾರಿ ಲೀಥಾ ಹೇಳಿದ್ದಾರೆ. ಮೃತರಲ್ಲಿ 21 ಮಕ್ಕಳು ಸೇರಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಶುಕ್ರವಾರದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಶವ ಪತ್ತೆಯಾಗುವ ವರೆಗೂ ಶೋಧಕಾರ್ಯ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟ್ರಾವಿಸ್ ಕೌಂಟಿಯಲ್ಲಿ ನಾಲ್ಕು, ಬರ್ನೆಟ್ ನಲ್ಲಿ ಮೂರು ಹಾಗೂ ಕೆಂಡಾಲ್ ನಲ್ಲಿ ಒಂದು ಸಾವು ವರದಿಯಾಗಿದೆ.

ಮುರಿದು ಬಿದ್ದ ಮರಗಳು, ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಕಾರುಗಳು ಮತ್ತು ಕೆಸರು ತುಂಬಿದ ಅವಶೇಷಗಳಡಿ ತಜ್ಞರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕ್ಯಾಂಪ್ ಮಿಸ್ಟಿಕ್ ನ ಸಲಹಾತಜ್ಞ ಬಹಿರಂಗಪಡಿಸಿದ 11 ಮಕ್ಕಳ ನಾಪತ್ತೆಗೆ ಹೊರತಾಗಿ ಎಷ್ಟು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News