ನೇಪಾಳದಲ್ಲಿ ಪ್ರವಾಹಕ್ಕೆ 9 ಬಲಿ, 20 ಮಂದಿ ನಾಪತ್ತೆ; ವ್ಯಾಪಕ ಹಾನಿ
PC | X @ttindia
ಕಠ್ಮಂಡು: ನೇಪಾಳದಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದು ನಿರಂತರ ಧಾರಾಕಾರ ಮಳೆ ಸುರಿಯುತ್ತಿದೆ. ರಸುವಾ ಜಿಲ್ಲೆಯ ನದಿಯಲ್ಲಿ ದಿಢೀರ್ ಪ್ರವಾಹದಿಂದ ಕನಿಷ್ಠ 9 ಮಮದಿ ಸಾವನ್ನಪ್ಪಿದ್ದು ಸುಮಾರು 20 ಮಂದಿ ನಾಪತ್ತೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. 127 ವಿದೇಶೀಯರ ಸಹಿತ 150ಕ್ಕೂ ಅಧಿಕ ಜನರನ್ನು ರಕ್ಷಿಸಿ ಕಠ್ಮಂಡುಗೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ. ರಸುವಾ ಜಿಲ್ಲೆಯಲ್ಲಿ ವಿದ್ಯುತ್ ಮತ್ತು ಟೆಲಿಫೋನ್ ಸೇವೆ ಮೊಟಕುಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ಕಠ್ಮಂಡು ಪೋಸ್ಟ್' ವರದಿ ಮಾಡಿದೆ. ನೇಪಾಳ-ಚೀನಾ ಗಡಿಭಾಗದ ಸನಿಹ ಇರುವ ಹಿಮನದಿಯ ಪ್ರಕೋಪದಿಂದ ಪ್ರವಾಹ ಸಂಭವಿಸಿರಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ಹೇಳಿವೆ.
ದಿಢೀರ್ ಪ್ರವಾಹದಿಂದ ರಸುವಾ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ನೇಪಾಳವನ್ನು ಚೀನಾಕ್ಕೆ ಸಂಪರ್ಕಿಸುವ ` ಸ್ನೇಹ ಸೇತುವೆ' ಕೊಚ್ಚಿ ಹೋಗಿದೆ. ರಾಸುವಗಾಧಿ ಜಲವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿದ್ದು ನೇಪಾಳ-ಚೀನಾ ಗಡಿಯ ಸನಿಹ ಇರುವ ಬಂದರಿಗೆ ಭಾಗಶಃ ಹಾನಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.