ಕೆನಡಾದ ಇತರ ಭಾರತೀಯ ರಾಜತಾಂತ್ರಿಕರ ಮೇಲೂ ಗಮನವಿರಿಸಲಾಗಿದೆ : ವಿದೇಶಾಂಗ ಸಚಿವೆ ಮಲನಿ ಜೋಲಿ
ವಿದೇಶಾಂಗ ಸಚಿವೆ ಮಲನಿ ಜೋಲಿ | PC : PTI
ಟೊರಂಟೊ: ಸಿಖ್ಖ್ ಪ್ರತ್ಯೇಕವಾದಿ ನಾಯಕ ಹರದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ತನ್ನ ದೇಶದಲ್ಲಿ ಉಳಿದುಕೊಂಡಿರುವ ಇತರ ಭಾರತೀಯ ರಾಜತಾಂತ್ರಿಕರ ಮೇಲೂ ಸ್ಪಷ್ಟವಾಗಿ ಗಮನವಿಡಲಾಗಿದೆಯೆಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲನಿ ಜೋಲಿ ತಿಳಿಸಿದ್ದಾರೆ.
ಕೆನಡಾ ಪ್ರಜೆಗಳ ಪ್ರಾಣವನ್ನು ಅಪಾಯ ತರುವ ಅಥವಾ ವಿಯೆನ್ನಾ ಒಡಂಬಡಿಕೆಯ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ರಾಜತಾಂತ್ರಿಕರನ್ನು ತನ್ನ ದೇಶವು ಸಹಿಸುವುದಿಲ್ಲವೆಂದು ಜೋಲಿ ತಿಳಿಸಿದ್ದಾರೆ.
ಮಾಂಟ್ರಿಯಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ ನಮ್ಮ ಇತಿಹಾಸದಲ್ಲಿಯೇ ನಾವು ಇಂತಹ ವಿದ್ಯಮಾನವನ್ನು ಯಾವತ್ತೂ ಕಂಡಿಲ್ಲ. ರಶ್ಯವು ಇಂತಹದ್ದೇ ಕೃತ್ಯವನ್ನು ಜರ್ಮನಿಯಲ್ಲಿ ಮತ್ತು ಬ್ರಿಟನ್‌ನಲ್ಲಿ ಎಸಗಿತ್ತು. ಈ ವಿಷಯದ ಕುರಿತಾಗಿ ನಾವು ದೃಢವಾದ ನಿಲುವನ್ನು ತೆಗೆದುಕೊಳ್ಳೇಕಾಗಕಿದೆ’’ ಎಂದು ಜೋಲಿ ಅವರು ತಿಳಿಸಿದ್ದಾರೆ.
ಕೆನಡಾದಲ್ಲಿನ ಇತರ ರಾಜತಾಂತ್ರಿಕರನ್ನು ಕೂಡಾ ಉಚ್ಛಾಟಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಲಿ ಅವರು, ಅವರ ಮೇಲೂ ಗಮನವಿರಿಸಲಾಗಿದೆ. ಒಟ್ಟಾವದಲ್ಲಿರುವ ಭಾರತೀಯ ಹೈಕಮೀಶನರ್ ಸೇರಿದಂತೆ ಆರು ಮಂದಿ ರಾಜತಾಂತ್ರಿಕರನ್ನು ಉಚ್ಛಾಟಿಸಲಾಗಿದೆ. ಯಾವುದೇ ರಾಜತಾಂತ್ರಿಕರು ವಿಯೆನ್ನಾ ಒಡಂಬಡಿಕೆಯನ್ನು ತುಲ್ಲಂಘಿಸುವುದನ್ನು ನಾವು ಸಹಿಸಲಾರೆವು ’’ ಎಂದು ಜೋಲಿ ಹೇಳಿದ್ದಾರೆ.
ಸಿಖ್ಖ್ ಪ್ರತ್ಯೇಕವಾದಿ ನಾಯಕ ಹರದೀಪ್‌ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಏಜೆಂಟರುಗಳು ಶಾಮೀಲಾಗಿರುವ ಸಾಧ್ಯತೆಯ ಬಗ್ಗೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಜಸ್ಚಿನ್ ಟ್ರುಡೋ ಆರೋಪಿಸಿದ ಬಳಿಕ ಭಾರತ ಹಾಗೂ ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದೆ.
ಹರದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದ ಜೊತೆ ತನ್ನ ರಾಯಭಾರಿಗೆ ಸಂಬಂಧ ಕಲ್ಪಿಸುವುದನ್ನು ಭಾರತವು ಖಂಡಿಸಿತ್ತು ಹಾಗೂ ಇದಕ್ಕೆ ಪ್ರತಿಭಟನೆಯಾಗಿ ಸೋಮವಾರ ಹೊಸದಿಲ್ಲಿಯಲ್ಲಿನ ಆರು ಮಂದಿ ಕೆನಡಾ ರಾಜತಾಂತ್ರಿಕರನ್ನು ಉಚ್ಛಾಟಿಸಿತ್ತು. ಕೆನಡಾ ಕೂಡಾ ತಾನು ಆರು ಮಂದಿ ರಾಜತಾಂತ್ರಿಕರನ್ನು ಉಚ್ಛಾಟಿಸುವುದಾಗಿ ತಿಳಿಸಿದೆ.