×
Ad

ಫ್ರಾನ್ಸ್‌: ಮುಸ್ಲಿಂ ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸ್‌ ಅಧಿಕಾರಿಗೆ ಆನ್‌ಲೈನ್‌ ನಿಧಿ ಸಂಗ್ರಹ !

ಇಲ್ಲಿ ಅಚ್ಚರಿಯ ವಿಚಾರವೆಂದರೆ ಯುವಕನೊಬ್ಬನ ಸಾವಿಗೆ ಕಾರಣರಾದ ಅಧಿಕಾರಿಗಾಗಿ ಸಂಗ್ರಹಿಸಿದ ನಿಧಿಯು, ಹತ್ಯೆಗೀಡಾದ 17 ವರ್ಷದ ನಾಹೇಲ್‌ ಎಂ ಕುಟುಂಬಕ್ಕಾಗಿ ನಡೆಸಲಾದ ನಿಧಿ ಸಂಗ್ರಹಕ್ಕಿಂತ ಅಧಿಕವಾಗಿದೆ. ನಾಹೇಲ್‌ ಕುಟುಂಬಸ್ಥರಿಗಾಗಿನ ನಿಧಿ ಸಂಗ್ರಹದ ಮೊತ್ತ ಸೋಮವಾರ 189,000 ಯುರೋ‌ ಆಗಿತ್ತು.

Update: 2023-07-04 13:19 IST

ಕೊಲೆಯಾದ ನಾಹೆಲ್‌ ಫೋಟೋ: Twitter

ಪ್ಯಾರಿಸ್:‌ ಕಳೆದ ವಾರ ಪ್ಯಾರಿಸ್‌ ಹೊರವಲಯದಲ್ಲಿ ಹದಿಹರೆಯದ ಯುವಕನೊಬ್ಬನನ್ನು ಗುಂಡಿಕ್ಕಿ ಸಾಯಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣರಾದ ಫ್ರೆಂಚ್‌ ಪೊಲೀಸ್‌ ಅಧಿಕಾರಿಯೊಬ್ಬರಿಗಾಗಿ Gofundme.com ಮುಖಾಂತರ ನಡೆಸಲಾದ ಆನ್‌ಲೈನ್‌ ನಿಧಿ ಸಂಗ್ರಹದ ಮೂಲಕ ಸೋಮವಾರ ಮಧ್ಯಾಹ್ನದ ತನಕ1 ಮಿಲಿಯನ್‌ ಯುರೋಗೂ ಅಧಿಕ ನಿಧಿ ಸಂಗ್ರಹಿಸಲಾಗಿದ್ದು ವೆಬ್‌ಸೈಟ್‌ ಮೂಲಕ ನಡೆಸಲಾದ ಈ ಆನ್‌ಲೈನ್‌ ನಿಧಿ ಸಂಗ್ರಹಕ್ಕೆ 50,000 ಕ್ಕೂ ಅಧಿಕ ಮಂದಿ ದೇಣಿಗೆ ನೀಡಿದ್ದಾರೆ. ಈ ನಿಧಿ ಸಂಗ್ರಹವನ್ನು ಬಲಪಂಥೀಯ ಮಾಧ್ಯಮ ವಿಶ್ಲೇಷಕಿ ಜೀನ್‌ ಮಸ್ಸೀಹ ಆರಂಭಿಸಿದ್ದು ಇವರು ಇಸ್ಲಾಂ ವಿರೋಧಿ ರಾಜಕಾರಣಿ ಎರಿಕ್‌ ಝೆಮ್ಮೋರ್‌ಗೆ ಹತ್ತಿರದವರು ಎಂದು ತಿಳಿದು ಬಂದಿದೆ.

ಇಲ್ಲಿ ಅಚ್ಚರಿಯ ವಿಚಾರವೆಂದರೆ ಯುವಕನೊಬ್ಬನ ಸಾವಿಗೆ ಕಾರಣರಾದ ಅಧಿಕಾರಿಗಾಗಿ ಸಂಗ್ರಹಿಸಿದ ನಿಧಿಯು, ಹತ್ಯೆಗೀಡಾದ 17 ವರ್ಷದ ನಾಹೇಲ್‌ ಎಂ ಕುಟುಂಬಕ್ಕಾಗಿ ನಡೆಸಲಾದ ನಿಧಿ ಸಂಗ್ರಹಕ್ಕಿಂತ ಅಧಿಕವಾಗಿದೆ. ನಾಹೇಲ್‌ ಕುಟುಂಬಸ್ಥರಿಗಾಗಿನ ನಿಧಿ ಸಂಗ್ರಹದ ಮೊತ್ತ ಸೋಮವಾರ 189,000 ಯುರೋ‌ ಆಗಿತ್ತು.

ತಮ್ಮ ಮೊಮ್ಮಗನ ಹತ್ಯೆಗೈದ ಪೊಲೀಸ್‌ ಅಧಿಕಾರಿಗೆ ದೊರೆಯುತ್ತಿರುವ ಬೆಂಬಲದ ಬಗ್ಗೆ ನಾಹೇಲ್‌ ಅಜ್ಜಿ ಆಘಾತ ವ್ಯಕ್ತಪಡಿಸಿದ್ದಾರೆ.

“ಅವನು ನನ್ನ ಮೊಮ್ಮಗನ ಪ್ರಾಣ ತೆಗೆದಿದ್ದಾನೆ. ಶಿಕ್ಷೆ ಅನುಭವಿಸಬೇಕು ಇತರರಂತೆಯೇ,” ಎಂದು ಅವರು ಹೇಳಿದ್ದಾರೆ. ತಮಗೆ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇದೆ ಎಂದೂ ಅವರು ತಿಳಿಸಿದ್ದಾರೆ.,

ಆರೋಪಿ ಪೊಲೀಸ್‌ ಅಧಿಕಾರಿ ಪರ ನಿಧಿ ಸಂಗ್ರಹವನ್ನು ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರಾನ್‌ ಅವರ ಪಕ್ಷದ ಮುಖಂಡರೂ ಟೀಕಿಸಿದ್ದಾರೆ. “ಜೀನ್‌ ಮೆಸ್ಸಿಹಾ ಬೆಂಕಿಯೊಡನೆ ಸರಸವಾಡುತ್ತಿದ್ದಾರೆ,” ಎಂದು ರಿನೈಸಾನ್ಸ್‌ ಸಂಸದ ಎರಿಕ್‌ ಬೊತೊರೆಲ್‌ ಟ್ವೀಟ್‌ ಮಾಡಿದ್ದಾರೆ ಹಾಗೂ ಆರೋಪಿ ಅಧಿಕಾರಿಗಾಗಿ ನಿಧಿ ಸಂಗ್ರಹ ಸರಿಯಲ್ಲ ಎಂದಿದ್ದಾರೆ. ಗೋಫಂಡ್‌ಮಿ ಉಲ್ಲೇಖಿಸಿ ಬರೆದಿರುವ ಸೋಶಿಯಲಿಸ್ಟ್‌ ಪಕ್ಷದ ಮುಖ್ಯಸ್ಥ ಒಲಿವಿಯರ್‌ ಫಾವರೆ, ಇದೊಂದು ನಾಚಿಕೆಗೇಡಿನ ಸಂಗ್ರಹ ಎಂದಿದ್ದಾರೆ.

ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಿಧಿ ಸಂಗ್ರಹ 1,023,430 ಯುರೋ ಆಗಿದ್ದು ಒಟ್ಟು 51,917 ಜನರು ದೇಣಿಗೆ ನೀಡಿದ್ದಾರೆ ಹಾಗೂ ಅತ್ಯಂತ ಹೆಚ್ಚು ವೈಯಕ್ತಿಕ ದೇಣಿಗೆ 3000 ಯುರೋ‌ ಆಗಿದೆ.

ಆರೋಪಿ ಪೊಲೀಸ್‌ ಅಧಿಕಾರಿಯನ್ನು ಫ್ಲೋರಿಯನ್‌ ಎಂ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಆತ ಪರವಾನಗಿ ಇಲ್ಲದೆ ಮರ್ಸಿಡಿಸ್‌ ಕಾರು ಓಡಿಸುತ್ತಿದ್ದುದನ್ನು ಗಮನಿಸಿ ಅಧಿಕಾರಿ ಅದನ್ನು ನಿಲ್ಲಿಸುತ್ತಿರುವುದು ಮತ್ತು ತನ್ನ ಬಂದೂಕು ತೆರೆದು ಕಾರು ಮುಂದಕ್ಕೆ ಸಾಗುತ್ತಿದ್ದಂತೆ ನಾಹೇಲ್‌ನತ್ತ ಗುಂಡು ಹಾರಿಸುತ್ತಿರುವುದು ಕಾಣಿಸುತ್ತದೆ. ಗುಂಡು ಹಾರಿಸುವ ಮೊದಲು ಬಂದೂಕಿನ ಇನ್ನೊಂದು ತುದಿಯಿಂದ ನಾಹೇಲ್‌ಗೆ ಅಧಿಕಾರಿಗಳು ತುಳಿಯುತ್ತಿರುವುದು ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News