ಅಧಿಕಾರ ಸ್ವೀಕರಿಸಿದ ಎರಡೇ ವಾರಗಳಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಫ್ರಾನ್ಸ್ ಪ್ರಧಾನಿ!
ಫ್ರಾನ್ಸ್‌ನ ನೂತನ ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು (PTI)
ಪ್ಯಾರಿಸ್: ಫ್ರಾನ್ಸ್‌ನ ನೂತನ ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು ತಾವು ಅಧಿಕಾರ ಸ್ವೀಕರಿಸಿದ ಎರಡೇ ವಾರಗಳಲ್ಲಿ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ಸೆಬಾಸ್ಟಿಯನ್ ಲೆಕೊರ್ನು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು ಆಯ್ದುಕೊಂಡಿದ್ದ ಸಚಿವ ಸಂಪುಟದ ಬಗ್ಗೆ ರಾಜಕೀಯ ವಲಯದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅದರಲ್ಲೂ ಮಾಜಿ ಹಣಕಾಸು ಸಚಿವ ಬ್ರುನೊ ಲೀ ಮೈರ್‌ರನ್ನು ರಕ್ಷಣಾ ಸಚಿವರನ್ನಾಗಿಸಿದ ಅವರ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ಭುಗಿಲೆದ್ದಿತ್ತು.
ಉಳಿದಂತೆ ಪ್ರಮುಖ ಹುದ್ದೆಗಳಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಈ ಹಿಂದಿನ ಸಚಿವ ಸಂಪುಟದಲ್ಲಿದ್ದ ಕನ್ಸರ್ವೇಟಿವ್ ಪಕ್ಷದ ಬ್ರುನೊ ರಿಟೈಲಿಯು ಆಂತರಿಕ ಸಚಿವರಾಗಿಯೇ ಮುಂದುವರಿದ್ದರು. ಅವರು ಪೊಲೀಸ್ ಇಲಾಖೆ ಹಾಗೂ ಆಂತರಿಕ ಭದ್ರತೆಯ ಉಸ್ತುವಾರಿ ಹೊಂದಿದ್ದರು. ಜೀನ್-ನೋಯೆಲ್ ಬ್ಯಾರಟ್ ವಿದೇಶಾಂಗ ಸಚಿವರಾಗಿ ಹಾಗೂ ಗೆರಾಲ್ಡ್ ಡಾರ್ಮಾನಿನ್ ಕಾನೂನು ಸಚಿವರಾಗಿ ತಮ್ಮ ಹುದ್ದೆಗಳಲ್ಲಿ ಮುಂದುವರಿದಿದ್ದರು.
ಆದರೆ, ರಾಷ್ಟ್ರೀಯ ಸಂಸತ್ತಿನಲ್ಲಿ ಬಹುಮತವಿಲ್ಲದ ಕಾರಣ, ನಾನು ನನ್ನ ಹಿಂದಿನ ಉತ್ತರಾಧಿಕಾರಿಗಳಂತೆ ವಿಶೇಷ ಅಧಿಕಾರವನ್ನು ಬಳಸಿಕೊಂಡು ಬಜೆಟ್ ಅನುಮೋದನೆ ಪಡೆಯುವುದಿಲ್ಲ. ಬದಲಾಗಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು ಘೋಷಿಸಿದ್ದಾರೆ.