×
Ad

ಗಾಝಾದಲ್ಲಿ ಮುಂದುವರಿದ ಇಸ್ರೇಲ್ ವೈಮಾನಿಕ ದಾಳಿ: 28 ಮಕ್ಕಳ ಸಹಿತ ಕನಿಷ್ಠ 103 ಮಂದಿ ಮೃತ್ಯು

Update: 2025-05-18 21:16 IST

ಸಾಂದರ್ಭಿಕ ಚಿತ್ರ | PC :aljazeera.com

ಗಾಝಾ: ಶನಿವಾರ ತಡರಾತ್ರಿಯಿಂದ ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 103 ಮಂದಿ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ.

ದಕ್ಷಿಣದ ಖಾನ್ ಯೂನಿಸ್‍ನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 18 ಮಕ್ಕಳು ಮತ್ತು 13 ಮಹಿಳೆಯರು ಸೇರಿದಂತೆ 48ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಾಂತರಗೊಂಡ ಜನರಿಗೆ ಆಶ್ರಯ ಕಲ್ಪಿಸಿದ್ದ ಟೆಂಟ್‍ಗಳು ಹಾಗೂ ಮನೆಗಳಿಗೆ ಕ್ಷಿಪಣಿ ಬಡಿದು ವ್ಯಾಪಕ ಹಾನಿಯಾಗಿದೆ ಎಂದು ನಾಸೆರ್ ಆಸ್ಪತ್ರೆಯ ವಕ್ತಾರ ವಿಯಾಮ್ ಫೇರ್ಸ್ ಹೇಳಿದ್ದಾರೆ.

ಉತ್ತರ ಗಾಝಾದಲ್ಲಿ ಜಬಾಲಿಯಾ ನಿರಾಶ್ರಿತರ ಶಿಬಿರದ ಬಳಿಯ ಮನೆಯೊಂದಕ್ಕೆ ಕ್ಷಿಪಣಿ ಬಡಿದು ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಜಬಾಲಿಯಾದಲ್ಲಿಯೇ ಮತ್ತೊಂದು ಮನೆಯ ಮೇಲೆ ನಡೆದ ದಾಳಿಯಲ್ಲಿ 7 ಮಕ್ಕಳು, ಓರ್ವ ಮಹಿಳೆ ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ . ಮಧ್ಯ ಗಾಝಾದಲ್ಲಿ ನಡೆದ ಮೂರು ಪ್ರತ್ಯೇಕ ದಾಳಿಯಲ್ಲಿ ಕನಿಷ್ಠ 12 ಮಂದಿ, ಜ್ವೀಡಾ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳು, ನಾಲ್ವರು ಮಹಿಳೆಯರ ಸಹಿತ 7 ಮಂದಿ , ಡೀರ್ ಅಲ್ ಬಲಾಹ್‍ನಲ್ಲಿ ಅಪಾರ್ಟ್‍ಮೆಂಟ್ ಮೇಲಿನ ದಾಳಿಯಲ್ಲಿ ಮಗು ಸಹಿತ 3 ಮಂದಿ, ನುಸೀರಾತ್ ಶಿಬಿರದ ಬಳಿ ನಡೆದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಇಲಾಖೆಯ ತುರ್ತು ಸೇವಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಗಾಝಾದಲ್ಲಿ ಇಂಡೋನೇಶ್ಯನ್ ಆಸ್ಪತ್ರೆಯ ಮೇಲೆ ಇಸ್ರೇಲ್ ಪಡೆಗಳು ಮುತ್ತಿಗೆ ಹಾಕಿದ ಬಳಿಕ ಉತ್ತರ ಗಾಝಾದಲ್ಲಿನ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳು `ಸೇವೆಯಿಂದ ಹೊರಗುಳಿದಿವೆ. ಇಂಡೊನೇಶ್ಯನ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲಿ ಪಡೆ ತನ್ನ ಆಕ್ರಮಣವನ್ನು ತೀವ್ರಗೊಳಿಸಿದ್ದು ರೋಗಿಗಳು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಸರಬರಾಜುಗಳ ಆಗಮವನ್ನು ತಡೆಹಿಡಿದಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಗಾಝಾದಲ್ಲಿರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಮತ್ತು ಹಮಾಸ್ ಅನ್ನು ಸೋಲಿಸುವ ಉದ್ದೇಶದ `ಆಪರೇಷನ್ ಗಿಡಿಯಾನ್'ನ ಆರಂಭಿಕ ಹಂತದ ಭಾಗವಾಗಿ ಗಡಿಯುದ್ದಕ್ಕೂ ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜನೆಗೊಳಿಸಲಾಗುವುದು. ಗಾಝಾ ಪಟ್ಟಿಯಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲು ಮತ್ತು ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ ಕಾರ್ಯಾಚರಣೆಯ ನಿಯಂತ್ರಣವನ್ನು ಸಾಧಿಸಲು ಸಿದ್ಧತೆಗಳ ಭಾಗವಾಗಿ ವ್ಯಾಪಕ ದಾಳಿ ಮತ್ತು ಸೈನ್ಯವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಇಸ್ರೇಲ್‍ ನ ಮಿಲಿಟರಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News