ಗಾಝಾದಲ್ಲಿ ಶಾಂತಿ ಸ್ಥಾಪನೆಗೆ ಅವಕಾಶ ಮಾಡಿಕೊಡಿ: ಇಸ್ರೇಲ್ ಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಒತ್ತಾಯ
ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ | PC : wmo.int
ಜಿನೆವಾ: ಗಾಝಾ ಯುದ್ಧದಲ್ಲಿ ಇಸ್ರೇಲ್ `ಕರುಣೆ ತೋರಬೇಕು' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಒತ್ತಾಯಿಸಿದ್ದು ಶಾಂತಿ ಸ್ಥಾಪನೆ ಇಸ್ರೇಲ್‍ನ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಭಾವೋದ್ವೇಗದಿಂದ ಮಾತನಾಡಿದ ಘೆಬ್ರಯೇಸಸ್ `ಯುದ್ಧವು ಇಸ್ರೇಲ್ ಗೆ ನೋವುಂಟು ಮಾಡುತ್ತಿದೆ ಮತ್ತು ಶಾಶ್ವತ ಪರಿಹಾರವನ್ನು ತರುವುದಿಲ್ಲ. ಗಾಝಾದ ಜನರು ಅನುಭವಿಸುತ್ತಿರುವ ಸಂಕಷ್ಟ, ಬವಣೆ ನಮಗೆಲ್ಲಾ ತಿಳಿದಿದೆ. ಯುದ್ಧದ ಸಂದರ್ಭದ ಕಷ್ಟಗಳನ್ನು ನಾನೂ ಅನುಭವಿಸಿದ್ದೇನೆ' ಎಂದು ಹೇಳಿದರು.
`ಆಹಾರವನ್ನು ಶಸ್ತ್ರಾಸ್ತ್ರಗೊಳಿಸುವುದು, ವೈದ್ಯಕೀಯ ಸರಬರಾಜುಗಳನ್ನು ಶಸ್ತ್ರಾಸ್ತ್ರಗೊಳಿಸುವುದು ನಿಜಕ್ಕೂ ತಪ್ಪು. ಗಾಝಾದಲ್ಲಿ ರಾಜಕೀಯ ಪರಿಹಾರದಿಂದ ಮಾತ್ರ ಅರ್ಥಪೂರ್ಣ ಶಾಂತಿ ಸ್ಥಾಪನೆಯಾಗಬಹುದು. ಶಾಂತಿಗೆ ಕರೆ ನೀಡುವುದು ಇಸ್ರೇಲ್‍ನ ಹಿತಾಸಕ್ತಿಗೂ ಪೂರಕವಾಗಿದೆ. ಯುದ್ಧವು ಇಸ್ರೇಲ್ ಗೆ ನೋವುಂಟು ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಅದು ಶಾಶ್ವತ ಪರಿಹಾರವನ್ನು ತರುವುದಿಲ್ಲ. ನೀವು (ಇಸ್ರೇಲ್) ಕರುಣೆಯನ್ನು ತೋರಬಹುದೇ ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ. ಅದು ನಿಮಗೂ ಒಳ್ಳೆಯದು ಮತ್ತು ಫೆಲೆಸ್ತೀನೀಯರಿಗೂ. ಅದು ಮನುಕುಲಕ್ಕೆ ಒಳ್ಳೆಯದು ಎಂದು ಘೆಬ್ರಯೇಸಸ್ ಹೇಳಿದರು. ಗಾಝಾದ 2.1 ದಶಲಕ್ಷ ಜನತೆ ಸಾವಿನ ಸನ್ನಿಹಿತ ಅಪಾಯದಲ್ಲಿದ್ದಾರೆ. ನಾವು ಆಹಾರದ ಕೊರತೆಯನ್ನು, ಹಸಿವನ್ನು ಕೊನೆಗೊಳಿಸಬೇಕಿದೆ. ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗಡೆಗೊಳಿಸುವ ಅಗತ್ಯವಿದೆ ಮತ್ತು ಮರುಹಂಚಿಕೆ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಮರು ಸ್ಥಾಪಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯವಿಭಾಗದ ನಿರ್ದೇಶಕ ಮೈಕೆಲ್ ರಿಯಾನ್ ಹೇಳಿದ್ದಾರೆ.
ಗಾಝಾ ನಿವಾಸಿಗಳು ಆಹಾರ, ನೀರು, ವೈದ್ಯಕೀಯ ಸರಬರಾಜು, ಇಂಧನ ಮತ್ತು ಆಶ್ರಯದ ತೀವ್ರ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಮಧ್ಯೆ, ಗುರುವಾರ ಗಾಝಾಕ್ಕೆ ಸುಮಾರು 90 ಟ್ರಕ್‍ಗಳಷ್ಟು ಅಗತ್ಯದ ಆಹಾರ ನೆರವನ್ನು ವಿಶ್ವಸಂಸ್ಥೆ ವಿತರಿಸಿರುವುದಾಗಿ ವರದಿಯಾಗಿದೆ. ನಿರಂತರ ದಾಳಿ, ಸ್ಥಳಾಂತರಿಸುವ ವಲಯಗಳ ವ್ಯಾಪ್ತಿಯಲ್ಲಿ ಇರುವ ಹಿನ್ನೆಲೆಯಲ್ಲಿ ಕಳೆದ ವಾರಗಳಲ್ಲಿ ಗಾಝಾದ ನಾಲ್ಕು ಪ್ರಮುಖ ಆಸ್ಪತ್ರೆಗಳು ವೈದ್ಯಕೀಯ ಸೇವೆಯನ್ನು ಅಮಾನತುಗೊಳಿಸಿವೆ.
ಗಾಝಾ ಪಟ್ಟಿಯ 36 ಆಸ್ಪತ್ರೆಗಳಲ್ಲಿ ಕೇವಲ 19 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಸಿಬ್ಬಂದಿ ಅಸಾಧ್ಯವಾದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗಾಝಾ ಪಟ್ಟಿಯ ಕನಿಷ್ಠ 94% ಆಸ್ಪತ್ರೆಗಳು ಹಾನಿಗೊಳಗಾಗಿವೆ ಅಥವಾ ನಾಶಗೊಂಡಿವೆ. ಉತ್ತರ ಗಾಝಾದಲ್ಲಿ ಬಹುತೇಕ ಆರೋಗ್ಯ ವ್ಯವಸ್ಥೆ ನಿಷ್ಕ್ರಿಯಗೊಂಡಿದೆ. ವಿನಾಶವು ವ್ಯವಸ್ಥಿತವಾಗಿದೆ. ಹಾನಿಗೊಂಡ ಆಸ್ಪತ್ರೆಗಳನ್ನು ದುರಸ್ತಿಗೊಳಿಸಿದರೂ ಮತ್ತೆ ಆಕ್ರಮಣಕ್ಕೆ ಒಳಗಾಗುತ್ತಿದೆ. ಈ ವಿನಾಶಕಾರಿ ಚಕ್ರವು ಕೊನೆಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ.