ಗಾಝಾದ ಜನನಿಬಿಡ ಪ್ರದೇಶದಲ್ಲಿ ಮಾನವೀಯ ಕದನ ವಿರಾಮ; ದಿನಾ 10 ಗಂಟೆ ಮಿಲಿಟರಿ ಚಟುವಟಿಕೆಗೆ ವಿರಾಮ: ಇಸ್ರೇಲ್ ಘೋಷಣೆ
PC : news.un.org
ಜೆರುಸಲೇಂ, ಜು.27: ಗಾಝಾ ಪಟ್ಟಿಯ ಜನನಿಬಿಡ ಪ್ರದೇಶಗಳಲ್ಲಿ ಮಾನವೀಯ ನೆರವು ಪೂರೈಕೆ ಮತ್ತು ವಿತರಣೆಗೆ ಅನುಕೂಲ ಮಾಡುವ ಉದ್ದೇಶದಿಂದ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಗಾಝಾ ಪಟ್ಟಿಯ ಜನನಿಬಿಡ ಪ್ರದೇಶದಲ್ಲಿ `ಮಿಲಿಟರಿ ಚಟುವಟಿಕೆಯ ಯುದ್ಧತಂತ್ರದ ವಿರಾಮವನ್ನು' ಘೋಷಿಸಿರುವುದಾಗಿ `ಟೈಮ್ಸ್ ಆಫ್ ಇಸ್ರೇಲ್' ರವಿವಾರ ವರದಿ ಮಾಡಿದೆ.
ಪ್ರತೀ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಿರಾಮ ಜಾರಿಯಲ್ಲಿರುತ್ತದೆ. ಅಲ್-ಮವಾಸಿ, ಡೀರ್ ಅಲ್-ಬಲಾಹ್ ಮತ್ತು ಗಾಝಾ ನಗರ ಸೇರಿದಂತೆ ಐಡಿಎಫ್ ಪದಾತಿ ದಳ ಈಗ ಕಾರ್ಯನಿರ್ವಹಿಸದ ಪ್ರದೇಶಗಳಲ್ಲಿ, ಮುಂದಿನ ಸೂಚನೆಯವರೆಗೆ ಪ್ರತೀ ದಿನ ಮಾನವೀಯ ವಿರಾಮ ಅನ್ವಯಿಸುತ್ತದೆ ಎಂದು ಇಸ್ರೇಲ್ ಮಿಲಿಟರಿ ಸ್ಪಷ್ಟನೆ ನೀಡಿದೆ.
ಈ ಕ್ರಮವು ರಾಜಕೀಯ ವ್ಯವಸ್ಥೆಯ ನಿರ್ದೇಶನದ ಮತ್ತು ಗಾಝಾ ಪಟ್ಟಿಯನ್ನು ಪ್ರವೇಶಿಸುವ ಮಾನವೀಯ ನೆರವಿನ ವ್ಯಾಪ್ತಿಯನ್ನು ಹೆಚ್ಚಿಸುವ ಐಡಿಎಫ್‍ನ ಪ್ರಯತ್ನದ ಭಾಗವಾಗಿದೆ. ಈ ನಿರ್ಧಾರವನ್ನು ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮನ್ವಯಗೊಳಿಸಲಾಗಿದೆ ಎಂದು ಐಡಿಎಫ್ ಹೇಳಿದೆ. ಗಾಝಾ ಪಟ್ಟಿಯಾದ್ಯಂತ ಆಹಾರ ಮತ್ತು ಔಷಧಗಳನ್ನು ಪೂರೈಸುವ ಮತ್ತು ವಿತರಿಸುವ ವಿಶ್ವಸಂಸ್ಥೆ ಮತ್ತು ಮಾನವೀಯ ನೆರವು ಸಂಸ್ಥೆಗಳ ವಾಹನಗಳಿಗೆ ಸುರಕ್ಷಿತ ಮಾರ್ಗವನ್ನು ಬೆಳಿಗ್ಗೆ 6ರಿಂದ ರಾತ್ರಿ 11 ಗಂಟೆಯವರೆಗೆ ಗೊತ್ತುಪಡಿಸಲಾಗುವುದು. ಇಸ್ರೇಲಿ ನಾಗರಿಕರನ್ನು ರಕ್ಷಿಸುವ ಸಲುವಾಗಿ ಗಾಝಾ ಪಟ್ಟಿಯಲ್ಲಿ ಈಗ ನಡೆಯುತ್ತಿರುವ ಕಾರ್ಯಾಚರಣೆಯ ಜೊತೆಗೇ ಮಾನವೀಯ ನೆರವು ಪೂರೈಸುವ ಪ್ರಯತ್ನಗಳಿಗೆ ನೆರವಾಗುವುದನ್ನು ಐಡಿಎಫ್ ಮುಂದುವರಿಸಲಿದೆ. ಅಗತ್ಯಕ್ಕೆ ತಕ್ಕಂತೆ ಈ ಚಟುವಟಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಐಡಿಎಫ್ ಸಿದ್ಧವಿದೆ ಎಂದು ಮಿಲಿಟರಿ ಹೇಳಿದೆ. ಶನಿವಾರ ರಾತ್ರಿ ಇಸ್ರೇಲಿ ವಾಯುಪಡೆ ಅಂತರಾಷ್ಟ್ರೀಯ ಗುಂಪುಗಳು ಒದಗಿಸಿದ ಹಿಟ್ಟು, ಸಕ್ಕರೆ ಹಾಗೂ ಇತರ ಆಹಾರ ವಸ್ತುಗಳನ್ನು `ಏರ್ ಡ್ರಾಪ್' ಮಾಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.