×
Ad

ಗಾಝಾ | ಇಸ್ರೇಲ್ ದಾಳಿಗೆ ಕನಿಷ್ಠ 38 ಮಂದಿ ಮೃತ್ಯು

Update: 2025-09-27 22:01 IST

PC : aljazeera.com

ದೆಯಿರ್ ಅಲ್ ಬಲಾಹ್,ಸೆ.27: ಗಾಝಾದಲ್ಲಿ ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿ ಹಾಗೂ ಗುಂಡು ಹಾರಾಟದ ಘಟನೆಗಳಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ. ಗಾಝಾದಲ್ಲಿ ಕದನವಿರಾಮ ಏರ್ಪಡಿಸುವಂತೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವ ನಡುವೆಯೂ ಇಸ್ರೇಲ್ ದಾಳಿಯನ್ನು ಮುಂದುವರಿಸಿರುವುದು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ.

ಕೇಂದ್ರ ಹಾಗೂ ಉತ್ತರ ಗಾಝಾದಲ್ಲಿ ಶನಿವಾರ ನಸುಕಿನಲ್ಲಿ ಇಸ್ರೇಲ್ ದಾಳಿಯನ್ನು ನಡೆಸಿದ್ದು, ಮೃತರಲ್ಲಿ ನುಸೈರಿಯತ್ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಒಂದೇ ಕುಟುಂಬದ 9 ಮಂದಿ ಸೇರಿದ್ದಾರೆ ಎಂದು ಅಲ್ ಅವ್ದಾ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ.

ಗಾಝಾದಲ್ಲಿ ಹಮಾಸ್ ವಿರುದ್ಧ ಕೈಗೊಂಡಿರುವ ‘ಕೆಲಸ’ ವನ್ನು ಇಸ್ರೇಲ್‌ ದೇಶವು ಪೂರ್ಣಗೊಳಿಸಬೇಕಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾಷಣ ಮಾಡಿದ ಕೆಲವೇ ತಾಸುಗಳ ಬಳಿಕ ಈ ದಾಳಿ ನಡೆದಿದೆ.

ಈ ನಡುವೆ ಗಾಝಾದಲ್ಲಿ ಕದನವಿರಾಮವನ್ನು ಏರ್ಪಡಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವೊಲಿಸಲು ಹಲವಾರು ದೇಶಗಳ ನಾಯಕರು ಯತ್ನಿಸುತ್ತಿದ್ದಾರೆ. ಟ್ರಂಪ್ ಅವರು ಶುಕ್ರವಾರ ಶ್ವೇತಭವನದ ಹೊರಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಾಝಾದಲ್ಲಿ ಸಂಘರ್ಷವನ್ನು ಶಮನಗೊಳಿಸಲು ಅಮೆರಿಕವು ಒಪ್ಪಂದವೊಂದನ್ನು ರೂಪಿಸುವ ಸನಿಹದಲ್ಲಿದೆ ಎಂದು ಹೇಳಿದ್ದಾರೆ.

ಶನಿವಾರ ಬೆಳಗ್ಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಝಾ ನಗರದ ತುಫಾಹ್ ವಸತಿ ಪ್ರದೇಶವು ಸಂಪೂರ್ಣ ನಾಶಗೊಂಡಿದ್ದು, ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News