×
Ad

ಗಾಝಾದ ಅಧಿಕಾರಕ್ಕೆ ಪಟ್ಟುಹಿಡಿದರೆ ಸಂಪೂರ್ಣ ನಿರ್ನಾಮ‌ : ಹಮಾಸ್‍ಗೆ ಟ್ರಂಪ್ ಎಚ್ಚರಿಕೆ

Update: 2025-10-05 21:40 IST

ಡೊನಾಲ್ಡ್ ಟ್ರಂಪ್ | Photo Credit : PTI

ವಾಷಿಂಗ್ಟನ್, ಅ.5: ಗಾಝಾದಲ್ಲಿ ಅಧಿಕಾರದಲ್ಲಿ ಉಳಿಯಲು ಹಮಾಸ್ ಪಟ್ಟುಹಿಡಿದರೆ ಸಂಪೂರ್ಣ ನಿರ್ನಾಮಗೊಳ್ಳಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮುಂದಿರಿಸಿದ 20 ಅಂಶಗಳ ಗಾಝಾ ಶಾಂತಿ ಯೋಜನೆಗೆ ಹಮಾಸ್ ಭಾಗಶಃ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಟ್ರಂಪ್ ಈ ಎಚ್ಚರಿಕೆ ರವಾನಿಸಿದ್ದು ಒತ್ತೆಯಾಳುಗಳ ಬಿಡುಗಡೆಗೆ ಮತ್ತು 20 ಅಂಶಗಳ ಗಾಝಾ ಶಾಂತಿ ಒಪ್ಪಂದ ಪೂರ್ಣಗೊಳ್ಳಲು ಅವಕಾಶ ನೀಡುವ ನಿಟ್ಟಿನಲ್ಲಿ ಗಾಝಾ ಪಟ್ಟಿಯಲ್ಲಿ ಬಾಂಬ್ ದಾಳಿಯನ್ನು ಇಸ್ರೇಲ್ ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಗಾಝಾದಲ್ಲಿ ಆರಂಭಿಕ ವಾಪಸಾತಿ ಮಾರ್ಗಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ. ಈಗ ಹಮಾಸ್ ತಕ್ಷಣ ಮುಂದುವರಿಯಬೇಕು. ಇಲ್ಲದಿದ್ದರೆ ಎಲ್ಲಾ ದಾರಿಗಳೂ ಬಂದ್ ಆಗುತ್ತವೆ. ನಾನು ವಿಳಂಬವನ್ನು ಸಹಿಸುವುದಿಲ್ಲ. ಇದನ್ನು ತಕ್ಷಣ, ಕ್ಷಿಪ್ರವಾಗಿ ಮಾಡೋಣ' ಎಂದು ಟ್ರಂಪ್ ಆಗ್ರಹಿಸಿದ್ದಾರೆ.

ಮಾತುಕತೆಗಳ ಬಳಿಕ ನಾವು ಪ್ರಸ್ತಾಪಿಸಿರುವ 20 ಅಂಶಗಳಲ್ಲಿ ಉಲ್ಲೇಖಿಸಿರುವ ಆರಂಭಿಕ ವಾಪಸಾತಿ ಮಾರ್ಗಕ್ಕೆ ಇಸ್ರೇಲ್ ಒಪ್ಪಿದ್ದು ಇದನ್ನು ಹಮಾಸ್‍ಗೆ ತಿಳಿಸಲಾಗಿದೆ. ಹಮಾಸ್ ದೃಢಪಡಿಸಿದರೆ ಕದನ ವಿರಾಮ ತಕ್ಷಣದಿಂದಲೇ ಪರಿಣಾಮಕಾರಿಯಾಗುತ್ತದೆ. ಒತ್ತೆಯಾಳುಗಳ ಮತ್ತು ಕೈದಿಗಳ ವಿನಿಮಯ ಪ್ರಾರಂಭವಾಗುತ್ತದೆ ಮತ್ತು ಇಸ್ರೇಲ್ ಫೆಲೆಸ್ತೀನಿಯನ್ ಪ್ರದೇಶದಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವ ಮುಂದಿನ ಹಂತಕ್ಕೆ ವೇದಿಕೆ ಕಲ್ಪಿಸುತ್ತೇವೆ. ಇದು ಈ 3 ಸಾವಿರ ವರ್ಷದ ದುರಂತದ ಅಂತ್ಯಕ್ಕೆ ನಮ್ಮನ್ನು ಹತ್ತಿರವಾಗಿಸುತ್ತದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಕೈದಿಗಳ ತ್ವರಿತ ಬಿಡುಗಡೆಗೆ ಹಮಾಸ್ ಆಗ್ರಹ

ಗಾಝಾ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಮಾತುಕತೆಗೆ ವೇದಿಕೆ ಸಿದ್ಧಗೊಂಡಿರುವಂತೆಯೇ, ಒತ್ತೆಯಾಳು-ಕೈದಿಗಳ ವಿನಿಮಯ ಪ್ರಕ್ರಿಯೆ ತ್ವರಿತವಾಗಿ ಆರಂಭವಾಗೊಳ್ಳಬೇಕೆಂದು ಹಮಾಸ್ ರವಿವಾರ ಆಗ್ರಹಿಸಿದೆ.

ʼಯುದ್ಧವನ್ನು ಕೊನೆಗೊಳಿಸುವ ಮತ್ತು ಕೈದಿಗಳ ವಿನಿಮಯ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಲು ಅವಕಾಶ ನೀಡುವ ಒಪ್ಪಂದವನ್ನು ತಲುಪಲು ಹಮಾಸ್ ಬಹಳ ಉತ್ಸುಕವಾಗಿದೆ' ಎಂದು ಹಮಾಸ್‍ನ ಹಿರಿಯ ಸದಸ್ಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News