ಗಾಝಾ ಕದನ ವಿರಾಮ : ಮೊದಲ ಹಂತದ ಒಪ್ಪಂದವನ್ನು ಸ್ವಾಗತಿಸಿದ ಜಾಗತಿಕ ಸಮುದಾಯ
Photo Credit : aljazeera.com
ವಾಷಿಂಗ್ಟನ್, ಅ.9: ಗಾಝಾ ಕದನ ವಿರಾಮವನ್ನು ಹಾಗೂ ಇಸ್ರೇಲಿ ಒತ್ತೆಯಾಳುಗಳ ಮತ್ತು ಫೆಲೆಸ್ತೀನಿ ಕೈದಿಗಳ ಬಿಡುಗಡೆಯನ್ನು ಉದ್ದೇಶಿಸಿರುವ ಶಾಂತಿ ಯೋಜನೆಯ ಪ್ರಥಮ ಹಂತಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಕಳೆದ 8 ತಿಂಗಳಿಂದ ನಡೆಸಿದ ಮಧ್ಯಸ್ಥಿಕೆ ಪ್ರಯತ್ನದ ನಂತರ ಟ್ರಂಪ್ ಸಾಧಿಸಿದ ಮಹತ್ವದ ಪ್ರಗತಿಯನ್ನು ಈ ಘೋಷಣೆ ಪ್ರತಿನಿಧಿಸಿದೆ. ಗಾಝಾ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಪ್ರಸ್ತಾಪಿಸಿರುವ 20 ಅಂಶಗಳ ಯೋಜನೆಯ ಬಗ್ಗೆ ಈಜಿಪ್ಟ್‍ನಲ್ಲಿ ನಡೆದ ಸಮಾಲೋಚನೆಯ ಬಳಿಕ ನಡೆದಿರುವ ಈ ಬೆಳವಣಿಗೆಗೆ ಜಾಗತಿಕ ಸಮುದಾಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಎಲ್ಲಾ ಸೆರೆಯಾಳುಗಳನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಮತ್ತು ಒಪ್ಪಂದದ ಭಾಗವಾಗಿ ಒಪ್ಪಲಾದ `ಗೆರೆ'ಗೆ ತನ್ನ ಪಡೆಗಳನ್ನು ಇಸ್ರೇಲ್ ಹಿಂದಕ್ಕೆ ಕರೆಸಿಕೊಳ್ಳಲಿದೆ. ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಾದಷ್ಟು ಬೇಗ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುವುದಾಗಿ ಟ್ರಂಪ್ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್, ಖತರ್ ಮತ್ತು ತುರ್ಕಿಯೆಗೆ ಧನ್ಯವಾದ ಅರ್ಪಿಸುವುದಾಗಿ ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಎರಡೂ ಸಹಿ ಹಾಕಿರುವ ಶಾಂತಿ ಯೋಜನೆಯ ಪ್ರಥಮ ಹಂತದ ಅಂಶಗಳು:
► ಎಲ್ಲಾ ಸೆರೆಯಾಳುಗಳನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
► ಒಪ್ಪಲಾದ `ಗೆರೆ'ಗೆ ಇಸ್ರೇಲ್ ತನ್ನ ಪಡೆಗಳನ್ನು ಹಿಂಪಡೆಯುತ್ತದೆ.
► ಈ ಪ್ರಥಮ ಹಂತವು ಶಾಶ್ವತ ಶಾಂತಿಯತ್ತ ಬಲಿಷ್ಠ ನಡೆಯಾಗಲಿದೆ. ಎಲ್ಲಾ ಪಕ್ಷಗಳನ್ನೂ ನ್ಯಾಯಯುತವಾಗಿ ಪರಿಗಣಿಸಲಾಗುತ್ತದೆ.
ಜಂಟಿ ಕಾರ್ಯಪಡೆಯಲ್ಲಿ
ಗಾಝಾದಲ್ಲಿ ಮೃತ ಒತ್ತೆಯಾಳುಗಳನ್ನು ಪತ್ತೆಹಚ್ಚುವ ಜಂಟಿ ಕಾರ್ಯಪಡೆಯಲ್ಲಿ ಅಮೆರಿಕ, ಖತರ್ ಮತ್ತು ಈಜಿಪ್ಟ್ ಜೊತೆಗೆ ತುರ್ಕಿಯೆ ಕೂಡ ಭಾಗವಹಿಸಲಿದೆ ಎಂದು ತುರ್ಕಿಯೆ ಅಧಿಕಾರಿಗಳು ಹೇಳಿದ್ದಾರೆ.
ಶಾಂತಿ ಯೋಜನೆಯ ಪ್ರಥಮ ಹಂತದ ಬಗ್ಗೆ ಈಜಿಪ್ಟ್‌ನಲ್ಲಿ ನಡೆದಿದ್ದ ಸಮಲೋಚನೆ ಸಭೆಯಲ್ಲಿ ತುರ್ಕಿಯೆ ಅಧಿಕಾರಿಗಳೂ ಪಾಲ್ಗೊಂಡಿದ್ದರು.