×
Ad

ಕದನ ವಿರಾಮ | ಗಾಝಾ ನಗರಕ್ಕೆ 3 ಲಕ್ಷ ಜನರ ವಾಪಸಾತಿ

Update: 2025-10-11 22:30 IST

Photo Credit : aljazeera.com

ಗಾಝಾ, ಅ.11: ಕದನ ವಿರಾಮ ಪ್ರಾರಂಭವಾದಾಗಿನಿಂದ 3 ಲಕ್ಷ ಜನರು ಗಾಝಾ ನಗರಕ್ಕೆ ಆಗಮಿಸಿದ್ದಾರೆ. ಆದರೆ ಅವರಿಗೆ ಸ್ಥಳಾವಕಾಶ ಕಲ್ಪಿಸಲು ಡೇರೆಗಳು ಅಥವಾ ಮನೆಗಳ ಕೊರತೆಯಿದೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಶನಿವಾರ ಹೇಳಿದೆ.

ಇಸ್ರೇಲ್ ನ ಆಕ್ರಮಣವು ಗಾಝಾ ನಗರ ಮತ್ತು ಉತ್ತರ ಗಾಝಾದಿಂದ ಸುಮಾರು 7 ಲಕ್ಷ ಜನರನ್ನು ಸ್ಥಳಾಂತರಿಸಿತ್ತು. ಶನಿವಾರ ಗಾಝಾ ಪಟ್ಟಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಂದರ್ಭ 150 ಫೆಲೆಸ್ತೀನೀಯರ ಮೃತದೇಹಗಳನ್ನು ಪತ್ತೆಹಚ್ಚಿರುವುದಾಗಿ ಮೂಲಗಳು ಹೇಳಿದೆ.

ಇಸ್ರೇಲ್ ಪಡೆಗಳು ಗಾಝಾದ ಕೆಲವು ಭಾಗಗಳಿಂದ ಹಿಂದಕ್ಕೆ ಸರಿದ ಬಳಿಕ ಆಂತರಿಕ ಹಿಂಸಾಚಾರದ ಮರುಕಳಿಸುವ ಭಯದ ನಡುವೆ ಗಾಝಾದ ಮೇಲೆ ಹಿಡಿತ ಸಾಧಿಸಲು ಹಮಾಸ್ 7 ಸಾವಿರ ಹೋರಾಟಗಾರರನ್ನು ಮರಳಿ ಕರೆಸಿಕೊಂಡಿರುವುದಾಗಿ ವರದಿಯಾಗಿದೆ. ಇಸ್ರೇಲ್ ಯುದ್ಧದ ಸಮಯದಲ್ಲಿ ಯುದ್ಧಾಪರಾಧ ಮತ್ತು ನರಮೇಧಗಳ ಬಗ್ಗೆ ಸ್ವತಂತ್ರ ಅಂತರಾಷ್ಟ್ರೀಯ ತನಿಖೆ ನಡೆಯಬೇಕೆಂದು ಗಾಝಾ ಅಧಿಕಾರಿಗಳು ಆಗ್ರಹಿಸಿದ್ದಾರೆ. ಈ ಮಧ್ಯೆ, ಅಮೆರಿಕಾದ ಸೆಂಟ್ರಲ್ ಕಮಾಂಡ್ ನ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಶನಿವಾರ ಗಾಝಾಕ್ಕೆ ಭೇಟಿ ನೀಡಿ ಅಲ್ಲಿ `ನಾಗರಿಕ-ಮಿಲಿಟರಿ ಸಮನ್ವಯ ಕೇಂದ್ರ' ಸ್ಥಾಪನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ಫೆಲೆಸ್ತೀನಿಯನ್ ಪ್ರದೇಶದಲ್ಲಿ ಅಮೆರಿಕಾದ ತುಕಡಿಗಳನ್ನು ನಿಯೋಜಿಸುವುದಿಲ್ಲ ಎಂದು ಅವರು ಈ ಸಂದರ್ಭ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News