ಗಾಝಾದ ಎಲ್ಲಾ ಗಡಿದಾಟು ತೆರೆಯಲು ವಿಶ್ವಸಂಸ್ಥೆ ಆಗ್ರಹ
ಯುದ್ಧ ಜರ್ಝರಿತ ಗಾಝಾಕ್ಕೆ ನೆರವು ಪೂರೈಕೆಯ ಸವಾಲು
ಸಾಂದರ್ಭಿಕ ಚಿತ್ರ | PC :NDTV
ಜಿನೆವಾ,: ಯುದ್ಧದಿಂದ ಜರ್ಝರಿತಗೊಂಡಿರುವ ಫೆಲೆಸ್ತೀನಿಯನ್ ಪ್ರದೇಶಕ್ಕೆ ತುರ್ತು ಅಗತ್ಯವಿರುವ ನೆರವು ಪೂರೈಕೆಗೆ ಅನುವು ಮಾಡಿಕೊಡಲು ಗಾಝಾದ ಎಲ್ಲಾ ಗಡಿದಾಟು(ಬಾರ್ಡರ್ ಕ್ರಾಸಿಂಗ್)ಗಳನ್ನು ತಕ್ಷಣವೇ ತೆರೆಯುವಂತೆ ವಿಶ್ವಸಂಸ್ಥೆ ಹಾಗೂ ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಮಿತಿ ಮಂಗಳವಾರ ಆಗ್ರಹಿಸಿದೆ.
ಅಮೆರಿಕಾ ಅಧ್ಯಕ್ಷರ ಯೋಜನೆಯಂತೆ ಗಾಝಾದಲ್ಲಿ ಪರಿಚಯಿಸಲಾಗಿರುವ ಕದನ ವಿರಾಮ ಒಪ್ಪಂದದ ಪ್ರಕಾರ ಬರಗಾಲ ಪೀಡಿತ ಪ್ರದೇಶಕ್ಕೆ ನೆರವಿನ ಪ್ರಮಾಣವನ್ನು ಹೆಚ್ಚಿಸಬೇಕಿದ್ದರೆ ಗಡಿ ದಾಟುಗಳನ್ನು ತಕ್ಷಣ ತೆರೆಯುವ ಅಗತ್ಯವಿದೆ. ಮಾನವೀಯ ನೆರವು ಅಗಾಧ ಪ್ರಮಾಣದಲ್ಲಿ ಪೂರೈಕೆಯಾಗಬೇಕಿರುವುದರಿಂದ ಎಲ್ಲಾ ಪ್ರವೇಶ ಸ್ಥಳಗಳನ್ನೂ ತೆರೆಯಬೇಕು ಎಂದು ಜಿನೆವಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೆಡ್‍ಕ್ರಾಸ್ ವಕ್ತಾರ ಕ್ರಿಶ್ಚಿಯನ್ ಕಾರ್ಡನ್ ಒತ್ತಾಯಿಸಿದ್ದಾರೆ.
ಗಾಝಾಕ್ಕೆ ಪ್ರವೇಶ ಕಲ್ಪಿಸುವ ಎಲ್ಲಾ ಗಡಿ ದಾಟುಗಳನ್ನೂ ತೆರೆಯಬೇಕಿದೆ. ಕೆಲವು ಗಡಿದಾಟುಗಳು ಭಾಗಶಃ ಹಾನಿಗೊಂಡಿವೆ. ಗಾಝಾದೊಳಗೆ ಟ್ರಕ್‍ಗಳು ಚಲಿಸಲು ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಗಾಝಾಕ್ಕೆ ಪೂರೈಸಲು ವಿಶ್ವಸಂಸ್ಥೆ 1,90,000 ಮೆಟ್ರಿಕ್ ಟನ್‍ಗಳಷ್ಟು ನೆರವಿನ ದಾಸ್ತಾನು ಹೊಂದಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಏಜೆನ್ಸಿ ಒಸಿಎಚ್‍ಎ ವಕ್ತಾರ ಜೆನ್ಸ್ ಲಾರ್ಕೆ ಹೇಳಿದ್ದಾರೆ.
ಈ ಪ್ರದೇಶದಲ್ಲಿ 5 ಲಕ್ಷ ಜನರು ಮಹಾ ದುರಂತದ ಅಂಚಿನಲ್ಲಿದ್ದಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ ನಂತರ ಆಗಸ್ಟ್ 22ರಂದು ಗಾಝಾದಲ್ಲಿ ಬರಗಾಲವನ್ನು ವಿಶ್ವಸಂಸ್ಥೆ ಘೋಷಿಸಿದೆ.