ಹಮಾಸ್ ಗಾಝಾ ಒಪ್ಪಂದ ಗೌರವಿಸದಿದ್ದರೆ ಯುದ್ಧ ಆರಂಭ: ಇಸ್ರೇಲ್ ರಕ್ಷಣಾ ಸಚಿವರ ಬೆದರಿಕೆ
Photo credit: NDTV
ಜೆರುಸಲೇಂ, ಅ.16: ಗಾಝಾದಲ್ಲಿ ಯುದ್ಧವನ್ನು ನಿಲ್ಲಿಸಿದ ಅಮೆರಿಕ ಬೆಂಬಲಿತ ಕದನ ವಿರಾಮವನ್ನು ಹಮಾಸ್ ಗೌರವಿಸದಿದ್ದರೆ ಯುದ್ಧವನ್ನು ಆರಂಭಿಸುವುದಾಗಿ ಇಸ್ರೇಲ್‍ನ ರಕ್ಷಣಾ ಸಚಿವರು ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.
ಮತ್ತೆರಡು ಒತ್ತೆಯಾಳುಗಳ ಮೃತದೇಹಗಳನ್ನು ಹಸ್ತಾಂತರಿಸಿದ ಹಮಾಸ್, ಉಳಿದ ಒತ್ತೆಯಾಳುಗಳ ಮೃತದೇಹದ ಬಗ್ಗೆ ತನಗೆ ಮಾಹಿತಿಯಿಲ್ಲ. ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾದಲ್ಲಿ ಧ್ವಂಸಗೊಂಡಿರುವ ಕಟ್ಟಡಗಳ ರಾಶಿಯಡಿಯಲ್ಲಿ ಸಿಲುಕಿರಬಹುದಾದ ಮೃತದೇಹಗಳ ಅವಶೇಷಗಳನ್ನು ಹೊರತೆಗೆಯಲು ವಿಶೇಷ, ಅತ್ಯಾಧುನಿಕ ಸಾಧನಗಳ ಅಗತ್ಯವಿದೆ ಎಂದು ಹೇಳಿದ ಬೆನ್ನಲ್ಲೇ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರ ಕಚೇರಿಯ ಹೇಳಿಕೆ ಹೊರಬಿದ್ದಿದೆ.
ಒಪ್ಪಂದದ ಅಂಶಗಳನ್ನು ಹಮಾಸ್ ಪಾಲಿಸದಿದ್ದರೆ, ಹಮಾಸ್‍ನ ಸಂಪೂರ್ಣ ಸೋಲಿಗಾಗಿ, ಗಾಝಾದಲ್ಲಿನ ವಾಸ್ತವಿಕತೆಯನ್ನು ಬದಲಾಯಿಸಲು ಮತ್ತು ಯುದ್ಧದ ಎಲ್ಲಾ ಉದ್ದೇಶಗಳನ್ನು ಸಾಧಿಸಲು ಅಮೆರಿಕದೊಂದಿಗೆ ಸಂಘಟಿತವಾಗಿ ಇಸ್ರೇಲ್ ಹೋರಾಟವನ್ನು ಆರಂಭಿಸುತ್ತದೆ' ಎಂದು ಇಸ್ರೇಲ್ ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
ಕದನ ವಿರಾಮ ಜಾರಿಗೆ ಬಂದ ಸೋಮವಾರದಿಂದ ಹಮಾಸ್ 20 ಇಸ್ರೇಲಿ ಒತ್ತೆಯಾಳುಗಳನ್ನು ಹಸ್ತಾಂತರಿಸಿದ್ದರೆ ಇಸ್ರೇಲ್ ಸುಮಾರು 2000 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆಗೊಳಿಸಿದೆ. ಗಾಝಾದಲ್ಲಿ ಉಳಿದಿರುವ 28 ಒತ್ತೆಯಾಳುಗಳ ಮೃತದೇಹಗಳಲ್ಲಿ 8 ಮೃತದೇಹಗಳನ್ನು ಹಮಾಸ್ ಹಸ್ತಾಂತರಿಸಿದೆ. ಆದರೆ ಇದರಲ್ಲಿ ಒಂದು ಮೃತದೇಹ ಇಸ್ರೇಲಿ ಒತ್ತೆಯಾಳುವಿನದ್ದಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ.
ಇಸ್ರೇಲ್ ಮತ್ತೆ 45 ಫೆಲೆಸ್ತೀನಿಯನ್ನರ ಮೃತದೇಹಗಳನ್ನು ದಕ್ಷಿಣ ಗಾಝಾದ ನಾಸೆರ್ ಆಸ್ಪತ್ರೆಗೆ ಹಸ್ತಾಂತರಿಸಿದ್ದು ಇದರೊಂದಿಗೆ 90 ಫೆಲೆಸ್ತೀನೀಯರ ಮೃತದೇಹಗಳನ್ನು ಇಸ್ರೇಲ್ ಹಸ್ತಾಂತರಿಸಿದಂತಾಗಿದೆ. ಟ್ರಂಪ್ ಅವರ ಯೋಜನೆಯಂತೆ ಒಬ್ಬ ಮೃತ ಒತ್ತೆಯಾಳುವಿನ ಮೃತದೇಹಕ್ಕೆ ಪ್ರತಿಯಾಗಿ ಇಸ್ರೇಲ್ 15 ಫೆಲೆಸ್ತೀನೀಯರ ಮೃತದೇಹಗಳನ್ನು ಮರಳಿಸಬೇಕು. ಈ ಮಧ್ಯೆ, ಗಾಝಾದಲ್ಲಿ ಕದನ ವಿರಾಮ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಾನವೀಯ ನೆರವನ್ನು ಒದಗಿಸಲು ಗಾಝಾಕ್ಕೆ ಎಲ್ಲಾ ಗಡಿದಾಟುಗಳನ್ನು ತಕ್ಷಣವೇ ತೆರೆಯಬೇಕು ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಏಜೆನ್ಸಿಯ ಮುಖ್ಯಸ್ಥ ಟಾಮ್ ಫ್ಲೆಚರ್ ಇಸ್ರೇಲನ್ನು ಆಗ್ರಹಿಸಿದ್ದಾರೆ.