ಗಾಝಾ | ಕದನ ವಿರಾಮ ಜಾರಿ ಬಳಿಕ ಇಸ್ರೇಲ್ ದಾಳಿಯಲ್ಲಿ 93 ಮಂದಿ ಮೃತ್ಯು
Update: 2025-10-25 23:07 IST
ಸಾಂದರ್ಭಿಕ ಚಿತ್ರ | Photo ; aljazeera.com
ಗಾಝಾ: ಅಕ್ಟೋಬರ್ 10ರಂದು ಜಾರಿಗೆ ಬಂದ ಕದನ ವಿರಾಮದ ನಂತರ, ಇಲ್ಲಿಯವರೆಗೆ ಗಾಝಾ ಮೇಲೆ ಇಸ್ರೇಲ್ ನಡೆಸಿರುವ ದಾಳಿಗಳಲ್ಲಿ ಕನಿಷ್ಠ 93 ಮಂದಿ ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ನಡುವೆ ಮನೆಗಳಿಗೆ ಮರಳುತ್ತಿರುವ ಫೆಲೆಸ್ತೀನ್ ನಾಗರಿಕರಿಗೆ ಕೇವಲ ಮನೆಗಳ ಅವಶೇಷಗಳು ಮಾತ್ರ ದೊರೆಯುತ್ತಿದೆ. ಜನರು ಆಹಾರ ಮತ್ತು ನೀರು ಸೇರಿದಂತೆ ಅತ್ಯಗತ್ಯ ವಸ್ತುಗಳಿಗೆ ಪರದಾಡುತ್ತಿದ್ದಾರೆ. ಗಾಝಾ ಪಟ್ಟಿಯಲ್ಲಿನ ಕನಿಷ್ಠ 15 ಲಕ್ಷ ಜನರಿಗೆ ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
ಯುದ್ಧೋತ್ತರ ಗಾಝಾಗೆ ನೆರವು ನೀಡಲು ಸ್ವತಂತ್ರ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲು ಒಪ್ಪಿಕೊಂಡಿರುವುದಾಗಿ ಹಮಾಸ್ ತಿಳಿಸಿದೆ.
ಅಕ್ಟೋಬರ್ 2023ರಿಂದ ಇಲ್ಲಿಯವರೆಗೆ ಗಾಝಾ ಮೇಲೆ ಇಸ್ರೇಲ್ ನಡೆಸಿದ ಯುದ್ಧದಲ್ಲಿ ಕನಿಷ್ಠ 68,280 ಮಂದಿ ಮೃತಪಟ್ಟಿದ್ದು, 1,70,375 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.