×
Ad

ಗಾಝಾದಲ್ಲಿ ಶಾಂತಿ ಅನುಷ್ಠಾನ ಅಂತಾರಾಷ್ಟ್ರೀಯ ಪಡೆಯ ಕಾರ್ಯವಲ್ಲ, ಶಾಂತಿ ಪಾಲನೆ ಮಾತ್ರ ಅದರ ಕೆಲಸ: ಜೋರ್ಡಾನ್

Update: 2025-10-27 20:48 IST

 ಜೋರ್ಡಾನ್‍ನ ದೊರೆ ಅಬ್ದುಲ್ಲಾ | Photo Credit : @KingAbdullahII

ಲಂಡನ್, ಅ.27: ಟ್ರಂಪ್ ಅವರ ಕದನ ವಿರಾಮ ಯೋಜನೆಯಡಿ ನಿಯೋಜಿಲ್ಪಡುವ ದೇಶಗಳು ಗಾಝಾದಲ್ಲಿ ಶಾಂತಿ ಜಾರಿಗೊಳಿಸುವ ಪ್ರಸ್ತಾಪವನ್ನು ತಿರಸ್ಕರಿಸಲಿವೆ ಎಂದು ಜೋರ್ಡಾನ್‌ ನ ದೊರೆ ಅಬ್ದುಲ್ಲಾ ಹೇಳಿದ್ದಾರೆ.

ಟ್ರಂಪ್ ಅವರ 20 ಅಂಶದ ಶಾಂತಿ ಯೋಜನೆಯಡಿ ಅರಬ್ ರಾಷ್ಟ್ರಗಳು ಮತ್ತು ಅಂತರಾಷ್ಟ್ರೀಯ ಪಾಲುದಾರರು `ಸ್ಥಿರೀಕರಣ ಪಡೆ'ಗೆ ಯೋಧರನ್ನು ಕಳುಹಿಸಲು ಬದ್ಧವಾಗಿರುತ್ತವೆ. ಈ ಪಡೆಯು ಗಾಝಾದಲ್ಲಿ `ಪರಿಶೀಲಿಸಲಾದ' ಫೆಲೆಸ್ತೀನಿಯನ್ ಪೊಲೀಸ್ ಪಡೆಗೆ ತರಬೇತಿ ಮತ್ತು ಬೆಂಬಲವನ್ನು ನೀಡುತ್ತದೆ.

ಗಾಝಾದೊಳಗೆ ಭದ್ರತಾ ಪಡೆಗಳ ಕೆಲಸವೇನು? ಶಾಂತಿ ಪಾಲನೆ ಎಂದು ನಾವು ಭಾವಿಸಿದ್ದೇವೆ. ಆದರೆ ಶಾಂತಿಯನ್ನು ಜಾರಿಗೊಳಿಸುವುದು ಎಂದಾದರೆ ಇದನ್ನು ಯಾರೂ ಬಯಸುವುದಿಲ್ಲ. ಶಾಂತಿ ಪಾಲನೆ ಎಂದರೆ ಅಲ್ಲಿರುವ ಸ್ಥಳೀಯ ಪೊಲೀಸ್ ಪಡೆ, ಅಂದರೆ ಫೆಲೆಸ್ತೀನ್ ಪೊಲೀಸ್ ಪಡೆಯನ್ನು ಬೆಂಬಲಿಸುವುದು. ಆದರೆ ಶಸ್ತ್ರಾಸ್ತ್ರ ಹಿಡಿದುಕೊಂಡು ಗಾಝಾದ ಸುತ್ತ ಗಸ್ತು ತಿರುಗುವುದಲ್ಲ. ಇಂತಹ ಪರಿಸ್ಥಿತಿಯಲ್ಲಿ ತೊಡಗಿಸಿಕೊಳ್ಳಲು ಯಾವುದೇ ದೇಶ ಇಷ್ಟಪಡುವುದಿಲ್ಲ . ಫೆಲೆಸ್ತೀನಿಯನ್ ಭದ್ರತಾ ಪಡೆಗೆ ತರಬೇತಿ ಪಡೆಯಲು ಜೋರ್ಡಾನ್ ಮತ್ತು ಈಜಿಪ್ಟ್ ಸಿದ್ಧವಿದೆ. ಆದರೆ ಇದು ಸಮಯ ತೆಗೆದುಕೊಳ್ಳುತ್ತದೆ. ಗಾಝಾ ಪಟ್ಟಿಯ ಪರಿಸ್ಥಿತಿಗೆ ತಮ್ಮ ದೇಶವು ರಾಜಕೀಯವಾಗಿ ತುಂಬಾ ಹತ್ತಿರದಲ್ಲಿರುವುದರಿಂದ ಗಾಝಾಕ್ಕೆ ಜೋರ್ಡಾನ್‌ ನ ಪಡೆಗಳನ್ನು ಕಳುಹಿಸುವುದಿಲ್ಲ' ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅಬ್ದುಲ್ಲಾ ಹೇಳಿದ್ದಾರೆ.

ಹಮಾಸ್ ಮತ್ತು ಇಸ್ರೇಲ್ ಅಥವಾ ಹಮಾಸ್ ಮತ್ತು ಇತರ ಫೆಲೆಸ್ತೀನಿಯನ್ ಬಣಗಳ ನಡುವೆ ದೀರ್ಘಾವಧಿಯಿಂದ ಮುಂದುವರಿದಿರುವ ಬಿಕ್ಕಟ್ಟಿನಲ್ಲಿ ತಾವೂ ಸಿಲುಕಿಕೊಳ್ಳುವ ಬಗ್ಗೆ ಅಮೆರಿಕಾ ಹಾಗೂ ಇತರ ದೇಶಗಳ ಕಳವಳವನ್ನು ಜೋರ್ಡಾನ್ ದೊರೆಯ ಹೇಳಿಕೆ ಪ್ರತಿಬಿಂಬಿಸಿದೆ. ಗಾಝಾದಲ್ಲಿ ಯಾವುದೇ ರಾಜಕೀಯ ಪಾತ್ರವನ್ನು ಬಿಟ್ಟುಕೊಡುವ ಹಮಾಸ್‍ನ ಭರವಸೆಯನ್ನು ಹಮಾಸ್ ಉಳಿಸಿಕೊಳ್ಳುವ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ಅಬ್ದುಲ್ಲಾ `ನನಗೆ ಅವರ ಪರಿಚಯವಿಲ್ಲ. ಆದರೆ ಅವರು ಅದನ್ನು ಪಾಲಿಸುವ ಬಗ್ಗೆ ಅವರೊಂದಿಗೆ ಹತ್ತಿರವಾಗಿ ಕೆಲಸ ಮಾಡುವ ಖತರ್ ಮತ್ತು ಈಜಿಪ್ಟ್ ತುಂಬಾ ಆಶಾವಾದಿಗಳಾಗಿವೆ ಎಂದು ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News