ಗಾಝಾ: ಇಸ್ರೇಲ್ ಪಡೆಯ ಗುಂಡಿನ ದಾಳಿಯಲ್ಲಿ 38 ಮಂದಿ ಮೃತ್ಯು
Update: 2025-06-16 22:02 IST
PC : aljazeera.com
ಗಾಝಾ: ದಕ್ಷಿಣ ಗಾಝಾದ ರಫಾ ನಗರ ಹಾಗೂ ಅದರ ಸಮೀಪದಲ್ಲಿರುವ ಆಹಾರ ವಿತರಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ 38 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಸೋಮವಾರ ಹೇಳಿದೆ.
ಇಸ್ರೇಲ್ ಮಿಲಿಟರಿಯ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿರುವ ಆಹಾರ ಕೇಂದ್ರಕ್ಕೆ ಸಾವಿರಾರು ಫೆಲೆಸ್ತೀನೀಯರು ಧಾವಿಸಿದಾಗ ಅವರನ್ನು ನಿಯಂತ್ರಿಸಲು ಇಸ್ರೇಲ್ ಪಡೆ ಗುಂಡು ಹಾರಿಸಿರುವುದಾಗಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಗಾಝಾ ಹ್ಯುಮಾನಿಟೇರಿಯನ್ ಫೌಂಡೇಷನ್(ಜಿಎಚ್ಎಫ್) ಗಾಝಾದಲ್ಲಿ ಆಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಇಲ್ಲಿಂದ ಆಹಾರ ಪಡೆಯಲು ನಿರ್ಧಿಷ್ಟ ಮಾರ್ಗಗಳನ್ನು ಗುರುತಿಸಿದ್ದು ಆ ದಾರಿಯ ಮೂಲಕ ಮಾತ್ರ ಆಗಮಿಸಬೇಕು. ನಿಗದಿತ ರಸ್ತೆಯನ್ನು ತಪ್ಪಿಸಿದರೆ ಅಪಾಯ ಸಂಭವಿಸಬಹುದು ಎಂದು ಇಸ್ರೇಲ್ ಮಿಲಿಟರಿ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.