×
Ad

ಗಾಝಾ ಕದನ ವಿರಾಮ ಇನ್ನೂ ಪೂರ್ಣಗೊಂಡಿಲ್ಲ: ಇಸ್ರೇಲ್

Update: 2025-01-16 20:32 IST

PC : NDTV

 ಜೆರುಸಲೇಂ: ಗಾಝಾ ಕದನ ವಿರಾಮ ಇನ್ನೂ ಪೂರ್ಣಗೊಂಡಿಲ್ಲ. ಹಮಾಸ್‍ನೊಂದಿಗಿನ ಕೊನೆಯ ಕ್ಷಣದ ಬಿಕ್ಕಟ್ಟು ಬಹುನಿರೀಕ್ಷಿತ ಕದನ ವಿರಾಮಕ್ಕೆ ಇಸ್ರೇಲ್‌ ನ ಅನುಮೋದನೆಯನ್ನು ವಿಳಂಬಗೊಳಿಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ.

ಹಮಾಸ್ ಹಿಂದೆ ಸರಿಯುವವರೆಗೆ ಗಾಝಾದಲ್ಲಿ ಯುದ್ಧವನ್ನು ವಿರಾಮಗೊಳಿಸಲು ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಅನುಮೋದಿಸಲು ತನ್ನ ಕ್ಯಾಬಿನೆಟ್ ಸಭೆ ನಡೆಸುವುದಿಲ್ಲ ಎಂದು ನೆತನ್ಯಾಹು ಹೇಳಿದ್ದಾರೆ. ಒಪ್ಪಂದದಲ್ಲಿ ಮತ್ತಷ್ಟು ಮಾರ್ಪಾಡುಗಳನ್ನು ಸಾಧಿಸುವ ಪ್ರಯತ್ನದಲ್ಲಿ ಒಪ್ಪಂದದ ಕೆಲವು ಅಂಶಗಳಿಂದ ಹಮಾಸ್ ಹಿಂದಕ್ಕೆ ಸರಿಯುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಮಧ್ಯಸ್ಥಿಕೆದಾರರು ಘೋಷಿಸಿದ ಕದನ ವಿರಾಮ ಒಪ್ಪಂದಕ್ಕೆ ಹಮಾಸ್ ಬದ್ಧವಾಗಿದೆ ಎಂದು ಹಮಾಸ್‍ನ ಹಿರಿಯ ಅಧಿಕಾರಿ ಇಝ್ಝತ್ ಅಲ್-ರಶ್ಕ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‍ರೊಂದಿಗೆ ಪ್ರಮುಖ ಮಧ್ಯಸ್ಥಿಕೆದಾರ ಖತರ್ ಬುಧವಾರ ಒತ್ತೆಯಾಳುಗಳ ಬಿಡುಗಡೆ ಹಾಗೂ ಮಧ್ಯಪ್ರಾಚ್ಯ ಪ್ರಾಂತದಲ್ಲಿ 15 ತಿಂಗಳುಗಳಿಂದ ಮುಂದುವರಿದ ಯುದ್ಧ ಅಂತ್ಯಗೊಳಿಸುವ ಕದನ ವಿರಾಮ ಒಪ್ಪಂದವನ್ನು ಘೋಷಿಸಿದ್ದರು.

ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ಬಿಡುಗಡೆಗೊಳಿಸುವ ಫೆಲೆಸ್ತೀನ್ ಕೈದಿಗಳ ವಿಷಯದಲ್ಲಿ ಬಿಕ್ಕಟ್ಟು ತಲೆದೋರಿದೆ. ಕೊಲೆ ಆರೋಪಿಗಳ ಬಿಡುಗಡೆ ವಿಷಯದಲ್ಲಿ ಇಸ್ರೇಲ್ `ವೀಟೊ' ಅಧಿಕಾರ ಹೊಂದಿರುತ್ತದೆ ಎಂಬುದನ್ನು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ ಎಂದು ನೆತನ್ಯಾಹು ಹೇಳುತ್ತಿದ್ದಾರೆ. ಆದರೆ ಇದನ್ನು ಹಮಾಸ್ ಮುಖಂಡ ಸಮಿ ಅಬು ಝುಹ್ರಿ ತಿರಸ್ಕರಿಸಿದ್ದು ಒಪ್ಪಂದದಿಂದ ಹಮಾಸ್ ಹಿಂದೆ ಸರಿಯುತ್ತಿದೆ ಎಂಬ ನೆತನ್ಯಾಹು ಹೇಳಿಕೆಗೆ ಯಾವುದೇ ಆಧಾರಗಳಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

► ಜ.19ರಿಂದ ಕದನ ವಿರಾಮ ಜಾರಿ: ಖತರ್

ಗಾಝಾದಲ್ಲಿ ಕದನ ವಿರಾಮ ಜನವರಿ 19ರಿಂದ ಪ್ರಾರಂಭಗೊಳ್ಳಲಿದೆ. ಒಪ್ಪಂದದ ಪ್ರಥಮ ಹಂತದಲ್ಲಿ ಇಸ್ರೇಲ್‌ ನ 33 ಒತ್ತೆಯಾಳುಗಳು ಬಿಡುಗಡೆಗೊಳ್ಳಲಿದ್ದಾರೆ ಎಂದು ಖತರ್ ಪ್ರಧಾನಿ ಹೇಳಿದ್ದಾರೆ. ಇಸ್ರೇಲಿ ಪಡೆಗಳು ಹಲವು ಭಾಗಗಳಿಂದ ಹಿಂದೆ ಸರಿಯಲಿವೆ ಮತ್ತು ಹಲವಾರು ಫೆಲೆಸ್ತೀನೀಯರು ತಮ್ಮ ಮನೆಗಳಿಗೆ ಹಿಂತಿರುಗಲು ಸಾಧ್ಯವಾಗಲಿದೆ. ಜತೆಗೆ ಯುದ್ಧದಿಂದ ಸಂತ್ರಸ್ತರಾದವರಿಗೆ ಮಾನವೀಯ ನೆರವು ನೀಡುವುದರಲ್ಲೂ ಹೆಚ್ಚಳವಾಗಲಿದೆ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News