×
Ad

ಗಾಝಾ ಕದನ ವಿರಾಮ ಮಾತುಕತೆ ಸ್ಥಗಿತ | ಹಮಾಸನ್ನು ಇಸ್ರೇಲ್ ಮುಗಿಸಿ ಬಿಡಬೇಕು: ಟ್ರಂಪ್ ಆಕ್ರೋಶ

Update: 2025-07-26 22:55 IST

PC: x.com/bsindia

ಜೆರುಸಲೇಂ, ಜು.26: ಗಾಝಾದಲ್ಲಿ ಕದನ ವಿರಾಮ ಒಪ್ಪಂದದ ಕುರಿತು ಇಸ್ರೇಲ್ ಮತ್ತು ಹಮಾಸ್ ನಡುವೆ ಖತರ್‌ ನಲ್ಲಿ ಈಜಿಪ್ಟ್, ಅಮೆರಿಕ ಮತ್ತು ಖತರ್‌ ನ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದ್ದ ಮಾತುಕತೆ ವಿಫಲಗೊಂಡಿರುವುದಾಗಿ ವರದಿಯಾಗಿದೆ.

ಹಮಾಸ್ ಜೊತೆ ನಡೆಯುತ್ತಿದ್ದ ಪರೋಕ್ಷ ಮಾತುಕತೆಯಿಂದ ತಮ್ಮ ನಿಯೋಗಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಅಮೆರಿಕ ಮತ್ತು ಇಸ್ರೇಲ್ ಘೋಷಿಸಿವೆ.

`ಇದು ತುಂಬಾ ಕೆಟ್ಟದಾಗಿದೆ. ಹಮಾಸ್‍ ಗೆ ಒಪ್ಪಂದ ಮಾಡಿಕೊಳ್ಳಲು ನಿಜವಾಗಿಯೂ ಇಷ್ಟವಿಲ್ಲ. ಅವರು ಸಾಯಲು ಬಯಸಿದ್ದಾರೆಂದು ನನಗನಿಸುತ್ತದೆ. ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳನ್ನು ಹಸ್ತಾಂತರಿಸಲು ಹಮಾಸ್ ಸಿದ್ಧವಿಲ್ಲ. ಯಾಕೆಂದರೆ ಅಂತಿಮ ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಬಳಿಕ ಏನಾಗುತ್ತದೆ ಎಂಬುದು ಅವರಿಗೆ ತಿಳಿದಿದೆ. ಇದೀಗ ಇಸ್ರೇಲ್ ಗಾಝಾದಲ್ಲಿನ ಕೆಲಸವನ್ನು ಮುಗಿಸಿಬಿಡಬೇಕು. ಹಮಾಸ್ ಅನ್ನು ತೊಡೆದು ಹಾಕಬೇಕು ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಮಾತುಕತೆಯಲ್ಲಿ ಹಮಾಸ್ ವಿಶ್ವಾಸಾರ್ಹ ರೀತಿಯಲ್ಲಿ ತೊಡಗಿಸಿಕೊಂಡಿಲ್ಲ. ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್‌ ನ ಪ್ರತಿಕ್ರಿಯೆ ಒಪ್ಪಂದವನ್ನು ತಲುಪಲು ಅವರು ಬಯಸಿಲ್ಲ ಎಂಬುದನ್ನು ತೋರಿಸಿದೆ. ಆದ್ದರಿಂದ ಗಾಝಾದಲ್ಲಿ ಪರ್ಯಾಯ ಆಯ್ಕೆಯ ಬಗ್ಗೆ ಅಮೆರಿಕ ಪರಿಗಣಿಸಲಿದೆ' ಎಂದು ಮಧ್ಯಪ್ರಾಚ್ಯ ವಿಷಯಗಳ ಬಗ್ಗೆ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಪ್ರತಿಪಾದಿಸಿದ್ದಾರೆ.

ಕದನ ವಿರಾಮ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಗಾಝಾಕ್ಕೆ ಸಂಪೂರ್ಣ ನೆರವು ದಿಗ್ಬಂಧನವನ್ನು ಮರು ಸ್ಥಾಪಿಸಬೇಕು ಮತ್ತು ಗಾಝಾ ಪ್ರದೇಶವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಅಲ್ಲಿನ ಜನರು ನಿರ್ಗಮಿಸುವಂತೆ `ಪ್ರೋತ್ಸಾಹಿಸಬೇಕು' ಹಾಗೂ ಅಲ್ಲಿ ಇಸ್ರೇಲಿ ವಸಾಹತುಗಳನ್ನು ಸ್ಥಾಪಿಸಬೇಕು ಎಂದು ಇಸ್ರೇಲಿನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್‍ಗ್ವಿರ್ ಆಗ್ರಹಿಸಿದ್ದಾರೆ.

► ಮಾತುಕತೆ ಮುಂದುವರಿಯಲಿದೆ: ಖತರ್

ಈ ಮಧ್ಯೆ, ಮಾತುಕತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ಶೀಘ್ರದಲ್ಲೇ ಮುಂದುವರಿಯಲಿದೆ ಎಂದು ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್ ಮತ್ತು ಖತರ್ ಹೇಳಿವೆ.

ಮಾತುಕತೆಯ ಸಂಕೀರ್ಣತೆಯನ್ನು ಗಮನಿಸಿದರೆ ಇಂತಹ ಸ್ಥಗಿತಗಳು ಸಾಮಾನ್ಯವಾಗಿವೆ. ಗಾಝಾದಲ್ಲಿ ಶಾಶ್ವತ ಕದನ ವಿರಾಮ ಒಪ್ಪಂದ ಸಾಧ್ಯವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಲಿದೆ ಎಂದು ಎರಡೂ ದೇಶಗಳ ಪ್ರತಿನಿಧಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News