ಗಾಝಾ ಅಮೆರಿಕದ ಸಮಸ್ಯೆಯಲ್ಲ: ಡೊನಾಲ್ಡ್ ಟ್ರಂಪ್
Photo | PTI
ವಾಷಿಂಗ್ಟನ್, ಜು.28: ಇಸ್ರೇಲ್-ಹಮಾಸ್ ನಡುವೆ ಮುಂದುವರಿದ ಸಂಘರ್ಷದಿಂದಾಗಿ ದುರಂತ ಮಾನವೀಯ ಪರಿಸ್ಥಿತಿ ಎದುರಿಸುತ್ತಿರುವ ಗಾಝಾ ವಲಯಕ್ಕೆ ನೆರವು ಪೂರೈಸಲು ಇತರ ದೇಶಗಳೂ ಕೈ ಜೋಡಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ.
ಗಾಝಾದಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು ` ಅಮೆರಿಕ ಗಾಝಾಕ್ಕೆ ಸಾಕಷ್ಟು ಕೆಲಸಗಳನ್ನು ಮಾಡಿದೆ ಮತ್ತು ಇನ್ನಷ್ಟು ನೆರವನ್ನು ಕಳುಹಿಸುತ್ತದೆ. ಸತ್ಯ ಹೇಳಬೇಕೆಂದರೆ ನಾವು ಆ ಪ್ರದೇಶಕ್ಕೆ ನೆರವು ಒದಗಿಸಿರದಿದ್ದರೆ ಜನತೆ ಉಪವಾಸ ಬೀಳುತ್ತಿದ್ದರು. ಆದರೆ ಗಾಝಾ ಅಮೆರಿಕದ ಸಮಸ್ಯೆಯಲ್ಲ, ಅದು ಅಂತರಾಷ್ಟ್ರೀಯ ಸಮಸ್ಯೆ. ಇತರ ದೇಶಗಳೂ ನೆರವು ಒದಗಿಸಲು ಮುಂದಾಗಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ. ಎರಡು ವಾರಗಳ ಹಿಂದೆ ಅಮೆರಿಕವು ಗಾಝಾಕ್ಕೆ 60 ದಶಲಕ್ಷ ಡಾಲರ್ ನೆರವು ಒದಗಿಸಿದೆ. ಆದರೆ ಇದನ್ನು ಯಾರೂ ಒಪ್ಪಿಕೊಂಡಿಲ್ಲ ಎಂದು ಟ್ರಂಪ್ ಹೇಳಿದ್ದು ಗಾಝಾಕ್ಕೆ ಒದಗಿಸಲಾಗುವ ನೆರವನ್ನು ಹಮಾಸ್ ಕದಿಯುತ್ತಿದೆ ಎಂದು ಆರೋಪಿಸಿದ್ದಾರೆ.