×
Ad

ಗಾಝಾದಲ್ಲಿನ ಬರಗಾಲ ಮಾನವ ನಿರ್ಮಿತ ಬಿಕ್ಕಟ್ಟು: ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಳವಳ

Update: 2025-08-28 20:32 IST

PC: PTI

ವಿಶ್ವಸಂಸ್ಥೆ, ಆ.28: ಗಾಝಾದಲ್ಲಿನ ಬರಗಾಲವು ಮಾನವ ನಿರ್ಮಿತ ಬಿಕ್ಕಟ್ಟು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು(ಅಮೆರಿಕಾವನ್ನು ಹೊರತುಪಡಿಸಿ) ಅಭಿಪ್ರಾಯಪಟ್ಟಿದ್ದು ಉಪವಾಸವನ್ನು ಯುದ್ಧಾಸ್ತ್ರವಾಗಿ ಬಳಸುವುದನ್ನು ಅಂತರಾಷ್ಟ್ರೀಯ ಮಾನವೀಯ ಕಾನೂನಿನಡಿ ನಿಷೇಧಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗಾಝಾದಲ್ಲಿ ತಕ್ಷಣ ಬೇಷರತ್ ಮತ್ತು ಶಾಶ್ವತ ಕದನ ವಿರಾಮ, ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಝಾದ್ಯಂತ ಸಾಕಷ್ಟು ಪ್ರಮಾಣದ ನೆರವು ಪೂರೈಕೆ ಮತ್ತು ನೆರವು ವಿತರಣೆಗೆ ಇಸ್ರೇಲ್ ವಿಧಿಸಿರುವ ಎಲ್ಲಾ ನಿರ್ಬಂಧಗಳನ್ನೂ ಬೇಷರತ್ತಾಗಿ ತೆರವುಗೊಳಿಸಬೇಕೆಂದು ಭದ್ರತಾ ಮಂಡಳಿಯ 14 ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿವೆ.

`ಗಾಝಾದಲ್ಲಿನ ಬರಗಾಲವನ್ನು ತಕ್ಷಣ ನಿಲ್ಲಿಸಬೇಕು. ಸಮಯವು ಅಮೂಲ್ಯವಾಗಿದೆ. ಮಾನವೀಯ ತುರ್ತು ಪರಿಸ್ಥಿತಿಯನ್ನು ವಿಳಂಬವಿಲ್ಲದೆ ಪರಿಹರಿಸಬೇಕು ಮತ್ತು ಇಸ್ರೇಲ್ ತನ್ನ ನೀತಿ, ಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಎಂದು ಭದ್ರತಾ ಮಂಡಳಿ ಒತ್ತಾಯಿಸಿದೆ.

ಇದಕ್ಕೂ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ದೊರೊಥಿ ಶಿಯಾ ` ಐಪಿಸಿ(ಸಂಯೋಜಿತ ಆಹಾರ ಸುರಕ್ಷತೆ) ವರದಿಯ ವಿಶ್ವಾಸಾರ್ಹತೆ ಮತ್ತು ಸಮಗ್ರತೆ ಪ್ರಶ್ನಾರ್ಹವಾಗಿದೆ. ಗಾಝಾದಲ್ಲಿ ಹಸಿವು ಪ್ರಮುಖ ಸಮಸ್ಯೆಯಾಗಿದೆ ಮತ್ತು ಅಲ್ಲಿ ಗಮನಾರ್ಹ ಮಾನವೀಯ ಅಗತ್ಯಗಳಿರುವುದು ನಮಗೆಲ್ಲರಿಗೂ ತಿಳಿದಿದೆ. ಈ ಅಗತ್ಯಗಳ ಬಗ್ಗೆ ಗಮನ ಹರಿಸುವುದಕ್ಕೆ ಅಮೆರಿಕ ಆದ್ಯತೆ ನೀಡುತ್ತದೆ' ಎಂದರು.

ಗಾಝಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬರಗಾಲದಿಂದ ಬಳಲುತ್ತಿವೆ ಮತ್ತು ಅದು ಇತರ ಪ್ರದೇಶಗಳಿಗೂ ಹರಡುವ ಅಪಾಯವಿದೆ ಎಂದು ಜಾಗತಿಕ ಆಹಾರ ಕೊರತೆಯ ಬಗ್ಗೆ ನಿಗಾ ವಹಿಸುವ `ದಿ ಇಂಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಷನ್(ಐಪಿಸಿ)' ಶುಕ್ರವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News