×
Ad

ಬಹುತೇಕ ಯುದ್ಧಾಪರಾಧಗಳ ಆರೋಪ ಮುಚ್ಚಿಹಾಕಿದ ಇಸ್ರೇಲ್!

Update: 2025-08-03 20:52 IST

Photo Credits: AP

ಲಂಡನ್, ಆ.3: ಗಾಝಾದಲ್ಲಿ ತನ್ನ ಪಡೆಗಳಿಂದ ನಿಂದನೆ ಮತ್ತು ಯುದ್ಧಾಪರಾಧಗಳ ಆರೋಪಗಳ ಪೈಕಿ 88% ಪ್ರಕರಣಗಳನ್ನು ಆರೋಪವನ್ನೇ ದಾಖಲಿಸದೆ ಅಥವಾ ತನಿಖೆಯನ್ನೇ ನಡೆಸದೆ ಮುಚ್ಚಲಾಗಿದೆ ಎಂದು ವಿಶ್ವದಾದ್ಯಂತ ಸಂಘರ್ಷ, ಘರ್ಷಣೆ ಪ್ರಕರಣಗಳ ಮೇಲ್ವಿಚಾರಣೆ ನಡೆಸುವ ಬ್ರಿಟನ್ ಮೂಲದ `ಆ್ಯಕ್ಷನ್ ಆನ್ ಆರ್ಮ್ಡ್ ವಾಯ್ಲೆನ್ಸ್' (ಎಒಎವಿ) ಸಂಸ್ಥೆ ವರದಿ ಮಾಡಿದೆ.

2023ರ ಅಕ್ಟೋಬರ್ ನಿಂದ 2025ರ ಜೂನ್ ವರೆಗಿನ ಅವಧಿಯಲ್ಲಿ 52 ಪ್ರಕರಣಗಳನ್ನು(ಇದರಲ್ಲಿ 1,303 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 1,880 ಮಂದಿ ಗಾಯಗೊಂಡಿದ್ದಾರೆ) ಪರಿಶೀಲಿಸಲಾಗಿದೆ. ಇದರಲ್ಲಿ ಕೇವಲ 1 ಪ್ರಕರಣಗಳಲ್ಲಿ ಜೈಲುಶಿಕ್ಷೆ ವಿಧಿಸಲಾಗಿದ್ದರೆ ಇತರ 5 ಪ್ರಕರಣಗಳಲ್ಲಿ `ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ' ಎಂದಷ್ಟೇ ತೀರ್ಪು ನೀಡಲಾಗಿದೆ. 7 ಪ್ರಕರಣಗಳಲ್ಲಿ ಯಾವುದೇ ದೋಷ ಸಾಬೀತಾಗಿಲ್ಲ ಎಂದು ತೀರ್ಪು ನೀಡಲಾಗಿದೆ. ಉಳಿದ 39 ಪ್ರಕರಣಗಳು ಇನ್ನೂ ಬಗೆಹರಿದಿಲ್ಲ ಎಂದು ಎಒಎವಿ ಮೂಲಗಳನ್ನು ಉಲ್ಲೇಖಿಸಿ `ದಿ ಗಾರ್ಡಿಯನ್' ವರದಿ ಮಾಡಿದೆ.

ಈ ಅಂಕಿಅಂಶಗಳು ತಮ್ಮ ಪಡೆಗಳಿಂದ ಅತ್ಯಂತ ಗಂಭೀರ ಪ್ರಮಾದಗಳು ಅಥವಾ ಯುದ್ಧಾಪರಾಧ ಸಂಭವಿಸಿರುವ ಕುರಿತ ಸಾರ್ವಜನಿಕ ಆರೋಪಗಳ ಬಹುಪಾಲು ಪ್ರಕರಣಗಳಲ್ಲಿ ಯಾವುದೇ ದೋಷವನ್ನು ಕಂಡುಕೊಳ್ಳಲು ಇಸ್ರೇಲ್ ವಿಫಲವಾಗಿರುವುದನ್ನು ಸೂಚಿಸುತ್ತದೆ ಎಂದು ಎಒಎಇ ಸದಸ್ಯರಾದ ಇಯಾನ್ ಒವರ್ಟನ್ ಮತ್ತು ಲುಕಾಸ್ ಸಂಟ್ಝೋರಿಸ್ ಹೇಳಿದ್ದಾರೆ.

2024ರ ಫೆಬ್ರವರಿಯಲ್ಲಿ ಗಾಝಾ ನಗರದಲ್ಲಿ ಆಹಾರ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಕನಿಷ್ಠ 112 ಫೆಲೆಸ್ತೀನೀಯರ ಹತ್ಯೆ, ಮೇ ತಿಂಗಳಿನಲ್ಲಿ ರಫಾದ ಶಿಬಿರಗಳ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 45 ಮಂದಿ ಮೃತಪಟ್ಟಿರುವುದು, ಜೂನ್ 1ರಂದು ರಫಾದ ಆಹಾರ ವಿತರಣೆ ಕೇಂದ್ರದತ್ತ ಸಾಗುತ್ತಿದ್ದ 31 ನಾಗರಿಕರ ಹತ್ಯೆ ಪ್ರಕರಣಗಳು ಇನ್ನೂ ಬಗೆಹರಿದಿಲ್ಲ. ನಾಗರಿಕರ ಸಾವು-ನೋವಿನ ಪ್ರಮಾಣ ಹೆಚ್ಚುತ್ತಿದ್ದರೂ ಈ ಬಗ್ಗೆ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್)ನ ಸ್ಪಂದನೆ ಅಪಾರದರ್ಶಕವಾಗಿದೆ ಎಂದು ವರದಿ ಹೇಳಿದೆ.

► ಐಡಿಎಫ್ ಪ್ರತಿಕ್ರಿಯೆ

ಕಾರ್ಯಾಚರಣೆಯ ಚಟುವಟಿಕೆಯ ಸಮಯದಲ್ಲಿ ಸಂಭವಿಸಿದ ಅಸಾಮಾನ್ಯ ಘಟನೆಗಳ ಬಗ್ಗೆ( ಕಾನೂನು ಉಲ್ಲಂಘನೆಯ ಶಂಕೆ ಇದ್ದರೆ) ದೇಶೀಯ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಆಂತರಿಕ ಸತ್ಯ ಶೋಧನಾ ಮೌಲ್ಯಮಾಪನಗಳು ಮತ್ತು ಮಿಲಿಟರಿ ಪೊಲೀಸ್ ವಿಚಾರಣೆಯನ್ನು ಬಳಸಿ ತನಿಖೆ ನಡೆಸಿರುವುದಾಗಿ ಐಡಿಎಫ್ ಹೇಳಿದೆ.

ಐಡಿಎಫ್ ನಿಂದ ತಪ್ಪಾಗಿರುವ ಬಗ್ಗೆ ಯಾವುದೇ ದೂರು, ಆರೋಪ ಅಥವಾ ವರದಿಗಳು ಪ್ರಾಥಮಿಕ ಪರಿಶೀಲನಾ ಪ್ರಕ್ರಿಯೆಗೆ ಒಳಪಡುತ್ತದೆ. ಬಳಿಕ, ಕ್ರಿಮಿನಲ್ ದುಷ್ಕೃತ್ಯದ ಬಗ್ಗೆ ಸಮಂಜಸ ಅನುಮಾನವಿದೆಯೇ ಎಂದು ಪರಿಶೀಲಿಸಲು ಈ ಪ್ರಕರಣಗಳನ್ನು ಸತ್ಯ ಶೋಧನಾ ತಂಡಕ್ಕೆ (ಎಫ್ಎಫ್ಎ) ವರ್ಗಾಯಿಸಲಾಗುತ್ತದೆ. 2024ರ ಆಗಸ್ಟ್ ನಲ್ಲಿ ಎಫ್ಎಫ್ಎ ಈಗ ನಡೆಯುತ್ತಿರುವ ಗಾಝಾ ಯುದ್ಧಕ್ಕೆ ಸಂಬಂಧಿಸಿದ ನೂರಾರು ಘಟನೆಗಳನ್ನು ಪರಿಶೀಲಿಸಿದ್ದು ಮಿಲಿಟರಿ ಅಡ್ವೊಕೇಟ್ ಜನರಲ್ 74 ಕ್ರಿಮಿನಲ್ ವಿಚಾರಣೆಗಳನ್ನು ಆರಂಭಿಸಿದ್ದಾರೆ ಎಂದು ಐಡಿಎಫ್ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News