ಗಾಝಾ | ಇಸ್ರೇಲ್ ದಾಳಿಯಲ್ಲಿ 22 ಮಕ್ಕಳ ಸಹಿತ 60 ಮೃತ್ಯು
Update: 2025-05-14 22:08 IST
ಸಾಂದರ್ಭಿಕ ಚಿತ್ರ | PC: PTI
ಗಾಝಾ: ಗಾಝಾದಾದ್ಯಂತ ಬುಧವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಮಕ್ಕಳ ಸಹಿತ 60 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಗಾಝಾದ ಜಬಾಲಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 50 ಮಂದಿ ಹಾಗೂ ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ಇತರ 10 ಮಂದಿ ಸಾವನ್ನಪ್ಪಿದ್ದಾರೆ. ಜಬಾಲಿಯಾದಲ್ಲಿ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಇಸ್ರೇಲ್ ನ ವೈಮಾನಿಕ ದಾಳಿ ಅಡ್ಡಿಯಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಈ ಮಧ್ಯೆ, ಜಬಾಲಿಯಾ ಹಾಗೂ ಸುತ್ತಮುತ್ತಲು ಹಮಾಸ್ ಗುಂಪಿನ ರಾಕೆಟ್ ಲಾಂಚರ್ ಸಹಿತ ಮೂಲಸೌಕರ್ಯಗಳು ಇರುವ ಮಾಹಿತಿ ದೊರಕಿದ್ದು ಈ ಪ್ರದೇಶದ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳಬೇಕೆಂದು ಇಸ್ರೇಲ್ ಮಂಗಳವಾರ ತಡರಾತ್ರಿ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ವರದಿಯಾಗಿದೆ