ಮಾರಣಾಂತಿಕ ದಿಗ್ಬಂಧನದಿಂದ ಗಾಝಾ ವಿಪತ್ತಿನ ಅಂಚಿನಲ್ಲಿ; ವಿಶ್ವಸಂಸ್ಥೆ, ರೆಡ್‍ಕ್ರಾಸ್ ಸಂಸ್ಥೆಗಳ ಕಳವಳ
PC : aljazeera.com
ಜಿನೆವಾ: ಎರಡು ತಿಂಗಳಿಂದ ಗಾಝಾಕ್ಕೆ ನೆರವು ಪೂರೈಕೆಯನ್ನು ಪೂರ್ಣಪ್ರಮಾಣದಲ್ಲಿ ತಡೆಹಿಡಿದಿರುವುದರಿಂದ ಆಹಾರ ಮತ್ತು ನೀರಿನ ತೀವ್ರ ಕೊರತೆಯಾಗಿದ್ದು ನೆರವು ಪೂರೈಕೆ ಕಾರ್ಯಾಚರಣೆ ಸಂಪೂರ್ಣ ಕುಸಿತದ ಅಂಚಿಗೆ ತಲುಪಿದೆ ಎಂದು ಮಾನವೀಯ ನೆರವು ಪೂರೈಕೆ ಏಜೆನ್ಸಿಗಳು ಕಳವಳ ವ್ಯಕ್ತಪಡಿಸಿವೆ.
ಯುದ್ಧದಿಂದ ಜರ್ಝರಿತಗೊಂಡ ಫೆಲೆಸ್ತೀನ್ ಪ್ರದೇಶದಲ್ಲಿರುವ ಭೀಕರ ಪರಿಸ್ಥಿತಿ ಅಪಾಯದ ಕರೆಗಂಟೆ ಮೊಳಗಿಸಿದೆ ಎಂದು ವಿಶ್ವಸಂಸ್ಥೆ ಹಾಗೂ ರೆಡ್‍ಕ್ರಾಸ್ ಹೇಳಿದ್ದು ತಕ್ಷಣ ಅಂತರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಗಾಝಾದಲ್ಲಿ ಮಾನವೀಯ ನೆರವಿನ ಉಪಕ್ರಮ ಸಂಪೂರ್ಣ ಕುಸಿತದ ಅಂಚಿನಲ್ಲಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಚೇತರಿಸಿಕೊಳ್ಳಲಾಗದ ಹಂತಕ್ಕೆ ತಲುಪಬಹುದು ಎಂದು ರೆಡ್‍ಕ್ರಾಸ್ ಅಂತರಾಷ್ಟ್ರೀಯ ಸಮಿತಿ ಎಚ್ಚರಿಕೆ ನೀಡಿದೆ.
ಗಾಝಾ ಪಟ್ಟಿಯ ಸುಮಾರು 2.4 ದಶಲಕ್ಷ ಫೆಲೆಸ್ತೀನೀಯರಿಗೆ ಪೂರೈಕೆಯಾಗುವ ಅಂತರಾಷ್ಟ್ರೀಯ ನೆರವನ್ನು ಇಸ್ರೇಲ್ ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ. ಕಳೆದ ಮಾರ್ಚ್ 2ರಿಂದ ಗಾಝಾಕ್ಕೆ ನೆರವು ಪೂರೈಕೆಯನ್ನು ಇಸ್ರೇಲ್ ತಡೆಹಿಡಿದಿದೆ. ದಿಗ್ಬಂಧನ ಪ್ರಾರಂಭಗೊಂಡಾಗಿನಿಂದಲೂ ಈ ಪ್ರದೇಶದಲ್ಲಿ ಮಾನವೀಯ ದುರಂತದ ಅಪಾಯದ ಬಗ್ಗೆ ವಿಶ್ವಸಂಸ್ಥೆ ನಿರಂತರ ಎಚ್ಚರಿಕೆ ನೀಡುತ್ತಾ ಬಂದಿದೆ. `ಗಾಝಾ ಪ್ರದೇಶದಲ್ಲಿನ ಜನತೆಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಆಹಾರದ ಸಂಗ್ರಹ ಮುಗಿದಿದೆ. `ಕಮ್ಯುನಿಟಿ ಕಿಚನ್'ಗಳು ಬಾಗಿಲು ಮುಚ್ಚುತ್ತಿವೆ ಮತ್ತು ಹಸಿವೆಯಿಂದ ಬಳಲುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ' ಎಂದು ವಿಶ್ವಸಂಸ್ಥೆಯ ಜಾಗತಿಕ ಆಹಾರ ಕಾರ್ಯಕ್ರಮ(ಡಬ್ಯ್ಲೂಎಫ್‍ಪಿ) ಕಳೆದ ವಾರ ವರದಿ ಮಾಡಿತ್ತು.
ದಿಗ್ಬಂಧನ ಅತ್ಯಂತ ಮಾರಕವಾಗಿದ್ದು ಆಹಾರದ ಸಂಗ್ರಹ ಈಗ ಕಾಲಿಯಾಗಿದೆ. ಮಕ್ಕಳು ಹಾಗೂ ಇತರ ದುರ್ಬಲ ವರ್ಗದವರು ಅಪೌಷ್ಠಿಕತೆ ಮತ್ತು ಆಹಾರದ ಕೊರೆತಯಿಂದ ಸಾಯುವ ಸ್ಥಿತಿಯಿದೆ. ಕುಡಿಯುವ ನೀರಿನ ಕೊರತೆಯಿದ್ದು ನೀರಿಗಾಗಿ ಸ್ಥಳೀಯರು ಸಂಘರ್ಷ ನಡೆಸುತ್ತಿದ್ದಾರೆ. ಬಾಂಬ್ ದಾಳಿ ಹಾಗೂ ಸ್ಫೋಟದಿಂದ ಬೆಂಕಿ ಹತ್ತಿಕೊಂಡರೆ ಅದನ್ನು ನಂದಿಸಲೂ ನೀರು ಲಭ್ಯವಾಗದೆ ಹಲವರು ಜೀವಂತ ದಹನಗೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯದ ಕೊರತೆಯ ಜತೆಗೆ ರಕ್ತದ ಕೊರತೆಯೂ ಹೆಚ್ಚಿರುವುದರಿಂದ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ' ಎಂದು ವಿಶ್ವಸಂಸ್ಥೆಯ ಮಾನವೀಯ ನೆರವಿನ ಏಜೆನ್ಸಿ ಒಸಿಎಚ್‍ಎ ವಕ್ತಾರೆ ಓಲ್ಗಾ ಚೆರೆವ್ಕೋ ಶುಕ್ರವಾರ ಗಾಝಾ ನಗರದಿಂದ ವೀಡಿಯೊ ಲಿಂಕ್ ಮೂಲಕ ಜಿನೆವಾದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಗಾಝಾ ಅವಶೇಷಗಳಲ್ಲಿ ಮಲಗಿದೆ, ಬೀದಿಯ ತುಂಬಾ ಕಲ್ಲುಮಣ್ಣುಗಳ ರಾಶಿ ತುಂಬಿದೆ. ಜೊತೆಗೆ ಗಾಝಾ ನಿವಾಸಿಗಳಿಗೆ ಸಾಮೂಹಿಕ ಸ್ಥಳಾಂತರದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಮಾರ್ಚ್ ಮಧ್ಯಭಾಗದಿಂದ ಇಸ್ರೇಲ್‍ನ ವೈಮಾನಿಕ ಕಾರ್ಯಾಚರಣೆ ಪುನರಾರಂಭ ಗೊಂಡಂದಿನಿಂದ 4,20,000ಕ್ಕೂ ಅಧಿಕ ಮಂದಿ ಸ್ಥಳಾಂತರದ ಅನಿವಾರ್ಯತೆಗೆ ಸಿಲುಕಿದ್ದಾರೆ. ನಿರಾಶ್ರಿತರು ಆಶ್ರಯ ಪಡೆದಿದ್ದ ಟೆಂಟ್‍ಗಳ ಮೇಲೆಯೂ ಬಾಂಬ್ ಮತ್ತು ಕ್ಷಿಪಣಿ ದಾಳಿ ನಡೆದಿದೆ ಎಂದವರು ಹೇಳಿದ್ದಾರೆ.
ಗಾಝಾದಲ್ಲಿನ ನಾಗರಿಕರು ಯುದ್ಧದ ಅಪಾಯವನ್ನು ಎದುರಿಸಲು, ನಿರಂತರ ಸ್ಥಳಾಂತರವನ್ನು ನಿಭಾಯಿಸಲು ಮತ್ತು ತುರ್ತು ಮಾನವೀಯ ಸಹಾಯದಿಂದ ವಂಚಿತರಾಗುವ ಪರಿಣಾಮಗಳನ್ನು ಸಹಿಸಿಕೊಳ್ಳಲು ದೈನಂದಿನ ಹೋರಾಟವನ್ನು ನಡೆಸುತ್ತಿದ್ದಾರೆ ಎಂದು ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸೊಸೈಟಿಯ ಕಾರ್ಯಾಚರಣಾ ವಿಭಾಗದ ಉಪಮುಖ್ಯಸ್ಥ ಪಾಸ್ಕಲ್ ಹುಂಡ್ಟ್ ಹೇಳಿದ್ದಾರೆ.
ಪರಿಸ್ಥಿತಿ ಘೋರವಾಗಿದೆ. ಗಾಝಾದ ಮಕ್ಕಳನ್ನು ನಾವು ಉಪವಾಸ ಕೆಡವುತ್ತಿದ್ದೇವೆ. ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಘಾಸಿಗೊಳಿಸುತ್ತಿದ್ದೇವೆ. ಈ ಪರಿಸ್ಥಿತಿ ಇನ್ನಷ್ಟು ಕಾಲ ಮುಂದುವರಿದರೆ ಭೀಕರ ದುರಂತಕ್ಕೆ ಮುನ್ನುಡಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಕಾರ್ಯ ವಿಭಾಗದ ನಿರ್ದೇಶಕ ಮೈಕ್ ರಯಾನ್ ಎಚ್ಚರಿಕೆ ನೀಡಿದ್ದಾರೆ.