ಗಾಝಾ ಶಾಂತಿ ಯೋಜನೆ ರಕ್ತಪಾತ ನಿಲ್ಲಿಸಲು ಸುವರ್ಣಾವಕಾಶ : ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್
PC | PTI
ಜಿನೆವಾ, ಅ.10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಝಾ ಶಾಂತಿ ಯೋಜನೆಯು ಫೆಲೆಸ್ತೀನಿಯನ್ ಪ್ರದೇಶದಲ್ಲಿ ರಕ್ತಪಾತ ಮತ್ತು ಸಂಕಟವನ್ನು ಶಾಶ್ವತವಾಗಿ ಕೊನೆಗೊಳಿಸಲು ಸುವರ್ಣಾವಕಾಶವಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ.
ಗಾಝಾದಲ್ಲಿನ ಹತ್ಯಾಕಾಂಡ ಮತ್ತು ಸಂಕಟಗಳನ್ನು ಶಾಶ್ವತವಾಗಿ ಕೊನೆಗೊಳಿಸಲು ಮತ್ತು ಪರಸ್ಪರ ವಿಶ್ವಾಸ, ನಂಬಿಕೆಯಿಂದ ಮುಂದುವರಿಯಲು ಎಲ್ಲಾ ಪಕ್ಷಗಳು ಹಾಗೂ ಪ್ರಭಾವೀ ರಾಷ್ಟ್ರಗಳಿಗೆ ಇದೊಂದು ಪ್ರಮುಖ ಅವಕಾಶವಾಗಿದೆ. ಗಾಝಾ ಪಟ್ಟಿಗೆ ಮಾನವೀಯ ನೆರವು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗಲು, ಎಲ್ಲಾ ಒತ್ತೆಯಾಳುಗಳ ಮತ್ತು ಬಂಧಿತ ಫೆಲೆಸ್ತೀನೀಯರ ಬಿಡುಗಡೆಗೆ ಒದಗಿ ಬಂದ ಪ್ರಮುಖ ಅವಕಾಶ ಇದಾಗಿದೆ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷರ ಶಾಂತಿ ಯೋಜನೆಯ ಆವೇಗವು ಹಗೆತನದ ಶಾಶ್ವತ ನಿಲುಗಡೆಗೆ, ನಂತರದ ಚೇತರಿಕೆ ಮತ್ತು ಪುನರ್ನಿರ್ಮಾಣದ ಪ್ರಕ್ರಿಯೆಗೆ ದಾರಿ ಮಾಡಿಕೊಡುತ್ತದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿ ಹೇಳಿದ್ದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿಗೆ ಅನುಗುಣವಾದ ಮತ್ತು ಎರಡು ರಾಷ್ಟ್ರಗಳ ಪರಿಹಾರ ಸೂತ್ರಕ್ಕೆ ವೇದಿಕೆ ಕಲ್ಪಿಸುವ ನಿರ್ಣಯವನ್ನು ಅನುಮೋದಿಸುವಂತೆ ಆಗ್ರಹಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಯೋಜನೆಯನ್ನು, ವಿಶೇಷವಾಗಿ ಆಸ್ಪತ್ರೆಗಳನ್ನು ಪುನರ್ನಿಮಿಸುವ ಪ್ರಸ್ತಾಪವನ್ನು ಸ್ವಾಗತಿಸಿದೆ. `ಉತ್ತಮ ಔಷಧವೆಂದರೆ ಶಾಂತಿ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ `ಎಕ್ಸ್'ನಲ್ಲಿ ಟ್ವೀಟ್ ಮಾಡಿದ್ದಾರೆ.