×
Ad

ಗಾಝಾ ಶಾಂತಿ ಯೋಜನೆ : ಈಜಿಪ್ಟ್‌ನಲ್ಲಿ ಸಮಾಲೋಚನಾ ಸಭೆ

ಹಮಾಸ್ ನಿಯೋಗಕ್ಕೆ ಖಲೀಲ್ ಅಲ್-ಹಯ್ಯಾ ನೇತೃತ್ವ

Update: 2025-10-06 21:14 IST

Photo Credits: AP

ಕೈರೋ, ಅ.6: ಗಾಝಾದಲ್ಲಿ ಎರಡು ವರ್ಷಗಳಿಂದ ಮುಂದುವರಿದಿರುವ ವಿನಾಶಕಾರಿ ಸಂಘರ್ಷವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿರಿಸಿರುವ 20 ಅಂಶಗಳ ಗಾಝಾ ಶಾಂತಿ ಯೋಜನೆಯ ಬಗ್ಗೆ ಸಮಾಲೋಚಿಸಲು ಅಮೆರಿಕ, ಇಸ್ರೇಲ್ ಮತ್ತು ಹಮಾಸ್ ನಿಯೋಗಗಳ ನಡುವಿನ ಮಾತುಕತೆ ಈಜಿಪ್ಟ್‌ನಲ್ಲಿ ಆರಂಭಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.

ಗಾಝಾದಲ್ಲಿರುವ ಒತ್ತೆಯಾಳುಗಳ ಬಿಡುಗಡೆ, ಗಾಝಾ ಯುದ್ಧ ಅಂತ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ಬಹುನಿರೀಕ್ಷಿತ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಹಮಾಸ್ ಹಾಗೂ ಅರಬ್, ಮುಸ್ಲಿಮ್ ಮತ್ತು ಇತರ ರಾಷ್ಟ್ರಗಳ ಜೊತೆಗೆ ಕಳೆದ ವಾರ ಸಕಾರಾತ್ಮಕ ಮಾತುಕತೆ ನಡೆದಿದೆ. ಈ ಮಾತುಕತೆಗಳು ಯಶಸ್ವಿಯಾಗಿವೆ. ಇದೀಗ ಅಂತಿಮ ವಿವರಗಳನ್ನು ಸ್ಪಷ್ಟಪಡಿಸಲು ತಾಂತ್ರಿಕ ತಂಡಗಳು ಈಜಿಪ್ಟ್‌ನಲ್ಲಿ ಕೆಲಸ ಮಾಡುತ್ತಿವೆ. ಪ್ರಥಮ ಹಂತವು ಈ ವಾರವೇ ಪೂರ್ಣಗೊಳ್ಳಬೇಕಿರುವುದರಿಂದ ತ್ವರಿತವಾಗಿ, ಅಂದರೆ ಎರಡು ದಿನಗಳೊಳಗೆ ಸಮಾಲೋಚನೆ ಮುಗಿಸುವಂತೆ ಸಮಾಲೋಚಕರಿಗೆ ತಿಳಿಸಿದ್ದೇನೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಮಾಸ್ ನಿಯೋಗದ ನೇತೃತ್ವವನ್ನು ಖಲೀಲ್ ಅಲ್-ಹಯ್ಯಾ ವಹಿಸಿದ್ದಾರೆ. ಕಳೆದ ತಿಂಗಳು ಖತರ್‌ನಲ್ಲಿ ಇಸ್ರೇಲ್ ನಡೆಸಿದ ಹತ್ಯಾ ಯತ್ನದಿಂದ ಪಾರಾದ ಬಳಿಕ ಅಲ್-ಹಯ್ಯಾ ಪಾಲ್ಗೊಳ್ಳುವ ಪ್ರಥಮ ಉನ್ನತ ಮಟ್ಟದ ಸಭೆ ಇದಾಗಿದೆ. ಕದನ ವಿರಾಮ, ಆಕ್ರಮಣಕಾರರು(ಇಸ್ರೇಲ್) ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಒತ್ತೆಯಾಳು-ಕೈದಿಗಳ ವಿನಿಮಯ ಪ್ರಕ್ರಿಯೆಗೆ ಕಾರ್ಯವಿಧಾನ ರೂಪಿಸುವುದು ಮಾತುಕತೆಯ ಪ್ರಮುಖ ಉದ್ದೇಶವಾಗಿದೆ ಎಂದು ಹಮಾಸ್ ಮೂಲಗಳು ಹೇಳಿವೆ.

ಇಸ್ರೇಲ್ ನಿಯೋಗ

ಗಾಝಾ ಮಾತುಕತೆಗಳಲ್ಲಿ ಇಸ್ರೇಲ್ ನಿಯೋಗದ ನೇತೃತ್ವ ವಹಿಸಲು ನಿಯೋಜನೆಗೊಂಡಿರುವ ಕಾರ್ಯತಂತ್ರದ ವ್ಯವಹಾರಗಳ ಸಚಿವ ರಾನ್ ಡೆರ್ಮರ್ ಅವರಿಲ್ಲದ ಇಸ್ರೇಲ್‍ನ ತಂಡ ಸೋಮವಾರ ಮಾತುಕತೆಯಲ್ಲಿ ಪಾಲ್ಗೊಂಡಿದೆ ಎಂದು ಇಸ್ರೇಲ್ ಸರಕಾರದ ಮೂಲಗಳು ಹೇಳಿವೆ. ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್), ಗುಪ್ತಚರ ಸೇವಾ ಇಲಾಖೆ(ಮೊಸ್ಸಾದ್), ಶಿನ್ ಬೆಟ್(ಇಸ್ರೇಲ್‍ನ ಆಂತರಿಕ ಭದ್ರತಾ ಏಜೆನ್ಸಿ)ನ ಅಧಿಕಾರಿಗಳು, ಇಸ್ರೇಲ್ ಪ್ರಧಾನಿಯ ವಿದೇಶಾಂಗ ವ್ಯವಹಾರ ಸಲಹೆಗಾರ ಒಫಿರ್ ಫಾಕ್, ಒತ್ತೆಯಾಳುಗಳ ವ್ಯವಹಾರಗಳ ಸಂಯೋಜಕ ಗಾಲ್ ಹಿರ್ಷ್ ನಿಯೋಗದಲ್ಲಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News