H-1B ವೀಸಾದಾರರಿಗೆ ಆಘಾತ: 60 ದಿನಗಳ ‘ಗ್ರೇಸ್ ಪೀರಿಯಡ್’ ರದ್ದಾಗುವ ಸಾಧ್ಯತೆ
Photo : indianexpress
ವಾಶಿಂಗ್ಟನ್, ಆ. 9: ಅಮೆರಿಕವು ತನ್ನ ವಲಸೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ತರಲು ಆಲೋಚಿಸುತ್ತಿದ್ದು, ಇದು ಸಾವಿರಾರು ವಿದೇಶಿ ಕಾರ್ಮಿಕರ ಮೇಲೆ ಪರಿಣಾಮ ಬೀರಬಹುದು. ಉದ್ಯೋಗ ಕಳೆದುಕೊಂಡ ನಂತರವೂ ಅಮೆರಿಕದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವ ಹಾಲಿ 60 ದಿನಗಳ `ಗ್ರೇಸ್ ಪೀರಿಯಡ್' ಅನ್ನು ರದ್ದುಗೊಳಿಸುವ ಪ್ರಸ್ತಾವನೆಯನ್ನು ಸರಕಾರ ಪರಿಶೀಲಿಸುತ್ತಿದೆ.
ಒಂದು ವೇಳೆ ಇದು ಜಾರಿಗೆ ಬಂದರೆ, ಉದ್ಯೋಗ ಕಳೆದುಕೊಂಡ ತಕ್ಷಣವೇ ಕಾರ್ಮಿಕರು ಮತ್ತು ಅವರ ಕುಟುಂಬಗಳು ಅಮೆರಿಕವನ್ನು ತೊರೆಯಬೇಕಾಗುತ್ತದೆ. ಈ ಕ್ರಮವು ಅಮೆರಿಕದಲ್ಲಿ ನುರಿತ ವಲಸಿಗರು ಉದ್ಯೋಗ ಬದಲಾಯಿಸುವ ವಿಧಾನವನ್ನು ಗಣನೀಯವಾಗಿ ಬದಲಾಯಿಸಬಹುದು ಮತ್ತು ಭಾರತೀಯ ಸಮುದಾಯಕ್ಕೆ ಅತಿ ದೊಡ್ಡ ಹೊಡೆತ ನೀಡಬಹುದು.
H-1B ವೀಸಾ ಕಾರ್ಯಕ್ರಮದಡಿ ಗರಿಷ್ಠ ಪ್ರಯೋಜನ ಪಡೆಯುವವರಲ್ಲಿ ಭಾರತೀಯರೇ ಮೊದಲ ಸ್ಥಾನದಲ್ಲಿದ್ದಾರೆ. ಅಧಿಕೃತ ಅಂಕಿಅಂಶದ ಪ್ರಕಾರ, 2024ರ ಆರ್ಥಿಕ ವರ್ಷದಲ್ಲಿ ಅನುಮೋದಿಸಲಾದ ಒಟ್ಟು H-1B ಅರ್ಜಿಗಳಲ್ಲಿ ಶೇಕಡಾ 71ರಷ್ಟು ಭಾರತೀಯರದೇ ಆಗಿದ್ದವು. ಪ್ರಸ್ತುತ 52 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಜನರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
ಉನ್ನತ ಕೌಶಲ ಹೊಂದಿರುವ ವಿದೇಶಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು 2017ರಲ್ಲಿ ಈ 60 ದಿನಗಳ ಗ್ರೇಸ್ ಪೀರಿಯಡ್ ಅನ್ನು ಪರಿಚಯಿಸಲಾಯಿತು. ಈ ನಿಯಮದಡಿ, ಅರ್ಹ ಕಾರ್ಮಿಕರು ಸತತ 60 ದಿನಗಳವರೆಗೆ ಅಥವಾ ಅವರ ಅಧಿಕೃತ ವಾಸ್ತವ್ಯದ ಅವಧಿ ಮುಗಿಯುವವರೆಗೆ ಅಮೆರಿಕದಲ್ಲಿಯೇ ಇರಬಹುದು. ಈ ಸಮಯವು ಅವರಿಗೆ ಹೊಸ ಉದ್ಯೋಗದಾತರನ್ನು ಹುಡುಕಲು, ವೀಸಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅಥವಾ ದೇಶದಲ್ಲಿ ಕಾನೂನುಬದ್ಧವಾಗಿ ಉಳಿಯಲು ಇತರ ಪರ್ಯಾಯ ಮಾರ್ಗಗಳನ್ನು ಹುಡುಕಲು ಅವಕಾಶ ನೀಡುತ್ತದೆ.