ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆಯ ಹತ್ಯೆ: 7 ತಿಂಗಳ ಬಳಿಕ ಸಂಗಾತಿಯ ಬಂಧನ
Photo | hindustantimes
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಮಹಿಳೆ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಏಳು ತಿಂಗಳ ಬಳಿಕ ಆಕೆಯ ಸಂಗಾತಿ ಎನ್ನಲಾದ 32 ವರ್ಷದ ಅಬ್ದುಲ್ ಗಫೂರಿಯನ್ನು ಬಂಧಿಸಲಾಗಿದೆ ಎಂದು ಟೊರೊಂಟೊ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಆಗಸ್ಟ್ 7ರಂದು ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಗಫೂರಿಯನ್ನು ಬಂಧಿಸಲಾಯಿತು. ಆತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.
ಹಿಮಾಂಶಿ ಮತ್ತು ಗಫೂರಿ ಪರಸ್ಪರ ಪರಿಚಿತರಾಗಿದ್ದರು. ಇಬ್ಬರೂ ಆತ್ಮೀಯ ಸಂಗಾತಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಟೊರೊಂಟೊ ಪೊಲೀಸ್ ಅಧಿಕಾರಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪೊಲೀಸ್ ಸಹಭಾಗಿಗಳೊಂದಿಗೆ ಸಮನ್ವಯ ಸಾಧಿಸಿ ಗಫೂರಿಯನ್ನು ಕೆನಡಾಕ್ಕೆ ವಾಪಸ್ ಕರೆತರುವಲ್ಲಿ ನೆರವಾದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಹತ್ಯೆಯ ಬಳಿಕ ಗಫೂರಿ ಯಾವ ದೇಶಕ್ಕೆ ಪರಾರಿಯಾಗಿದ್ದ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಕಳೆದ ಡಿಸೆಂಬರ್‌ನಲ್ಲಿ ಹಿಮಾಂಶಿ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ, ಗಫೂರಿಯನ್ನು ಬಂಧಿಸಲು ಕೆನಡಾದ ಕಾನೂನು ಜಾರಿ ಸಂಸ್ಥೆಗಳು ದೇಶವ್ಯಾಪಿ ವಾರಂಟ್ ಹೊರಡಿಸಿದ್ದವು.
ಹತ್ಯೆ ಪೂರ್ವಯೋಜಿತವಾಗಿತ್ತು ಮತ್ತು ಅದಕ್ಕೆ ಉದ್ದೇಶವಿತ್ತು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದರೆ, ಪ್ರಥಮ ದರ್ಜೆ ಕೊಲೆ ಆರೋಪಕ್ಕೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸಬಹುದು.
ಕಾಣೆಯಾದ ಮಹಿಳೆ ಮನೆಯಲ್ಲಿ ಪತ್ತೆ
ಡಿಸೆಂಬರ್ 19ರಂದು ಮಹಿಳೆಯೊಬ್ಬರು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿತ್ತು. ಈ ಮಾಹಿತಿ ಆಧರಿಸಿ ಟೊರೊಂಟೊ ಪೊಲೀಸರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದರು.
ಮರುದಿನ, ಡಿಸೆಂಬರ್ 20ರಂದು ಬೆಳಿಗ್ಗೆ 6.30ರ ಸುಮಾರಿಗೆ ಕಾಣೆಯಾಗಿದ್ದ ಮಹಿಳೆಯನ್ನು ಮನೆಯೊಳಗೆ ಪತ್ತೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದರು.
ಬಳಿಕ ಆಕೆಯ ಸಾವನ್ನು ಕೊಲೆ ಎಂದು ತನಿಖೆ ಚುರುಕುಗೊಳಿಸಲಾಯಿತು. ಹಿಮಾಂಶಿ ಮತ್ತು ಗಫೂರಿ ‘ಆತ್ಮೀಯರಾಗಿದ್ದರು’ ಎಂದು ಟೊರೊಂಟೊ ಪೊಲೀಸರನ್ನು ಉಲ್ಲೇಖಿಸಿ CP24 ವರದಿ ಮಾಡಿದೆ.
ಪೊಲೀಸರು ಎರಡು ದಿನಗಳ ಬಳಿಕ ಹಿಮಾಂಶಿಯ ಗುರುತನ್ನು ಖಚಿತಪಡಿಸಿದರು. ನಂತರ ಗಫೂರಿ ಪ್ರಕರಣದ ಪ್ರಮುಖ ಶಂಕಿತ ಎಂದು ಗುರುತಿಸಲ್ಪಟ್ಟರು. ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು.
ಭಾರತೀಯ ಪ್ರಜೆ ಎಂದು ಕಾನ್ಸುಲೇಟ್ ದೃಢೀಕರಣ
ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ಹಿಮಾಂಶಿ ಖುರಾನಾ ಭಾರತೀಯ ಪ್ರಜೆ ಎಂದು ದೃಢಪಡಿಸಿದ್ದಾರೆ.
‘ಟೊರೊಂಟೊದಲ್ಲಿ ನಡೆದ ಭಾರತೀಯ ಯುವತಿ ಹಿಮಾಂಶಿ ಖುರಾನಾ ಅವರ ಹತ್ಯೆಯಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ’ ಎಂದು ಕಾನ್ಸುಲೇಟ್ Xನಲ್ಲಿ ತಿಳಿಸಿತ್ತು.
ಹಿಮಾಂಶಿ ಕುಟುಂಬಕ್ಕೆ ಆಳವಾದ ಸಂತಾಪ ಸೂಚಿಸಿದ್ದ ಕಾನ್ಸುಲೇಟ್, ಈ ಪ್ರಕರಣದ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ ಎಂದು ತಿಳಿಸಿತ್ತು.