ಮೊಜ್ತಬಾ ಖಾಮಿನೈ ಆರೋಗ್ಯದ ಬಗ್ಗೆ ಇಸ್ರೇಲ್ ಮಾಧ್ಯಮಗಳಲ್ಲಿ ವರದಿ; ವೀಡಿಯೊ ಬಿಡುಗಡೆ ಮಾಡಿದ ಇರಾನ್
Photo Credit : indiatoday
ಹೊಸದಿಲ್ಲಿ: ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಅವರ ಆರೋಗ್ಯದ ಬಗ್ಗೆ ಇಸ್ರೇಲಿ ಮಾಧ್ಯಮಗಳಲ್ಲಿ ಗಂಭೀರ ವರದಿಗಳು ಪ್ರಕಟವಾದ ಬೆನ್ನಲ್ಲೇ, ಖಾಮಿನೈ ಆರೋಗ್ಯವಾಗಿರುವುದನ್ನು ತೋರಿಸುವ ವೀಡಿಯೊವನ್ನು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.
ಖಾಮಿನೈ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಆರೋಗ್ಯದ ಬಗ್ಗೆ ಇರಾನ್ ನ ನಾಯಕತ್ವದಲ್ಲಿ ಕಳವಳ ಉಂಟಾಗಿದೆ ಎಂದು ಇಸ್ರೇಲಿನ ಮಾಧ್ಯಮಗಳು ವರದಿ ಮಾಡಿದ್ದವು. ಖಾಮಿನೈ ಅವರ ಆರೋಗ್ಯ ಸ್ಥಿತಿ ‘ಅತ್ಯಂತ ಗಂಭೀರವಾಗಿದೆ’ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ ಕೆಲವು ದಿನಗಳ ಬಳಿಕ ಮೆಹರ್ ಈ ವೀಡಿಯೊ ಬಿಡುಗಡೆ ಮಾಡಿದೆ.
ಮೆಹರ್ ಮೊದಲ ಬಾರಿಗೆ ಬಿಡುಗಡೆ ಮಾಡಿರುವ ಈ ವೀಡಿಯೊದಲ್ಲಿ ಖಾಮಿನೈ ಆರೋಗ್ಯವಾಗಿರುವಂತೆ ಕಾಣಿಸುತ್ತಾರೆ. ಅವರ ಆರೋಗ್ಯ ಮತ್ತು ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಹರಡುತ್ತಿರುವ ಊಹಾಪೋಹಗಳನ್ನು ತಳ್ಳಿಹಾಕುವುದು ವೀಡಿಯೊ ಬಿಡುಗಡೆ ಉದ್ದೇಶ ಎಂದು ಹೇಳಲಾಗಿದೆ.
‘ಸ್ಥಿತಿ ಅತ್ಯಂತ ಗಂಭೀರ’
ಶುಕ್ರವಾರ, ಇರಾನ್ ನೊಳಗಿನ ಮೂಲಗಳನ್ನು ಉಲ್ಲೇಖಿಸಿದ ಇಸ್ರೇಲಿನ ಚಾನೆಲ್ 14, ಖಾಮಿನೈ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿ ಮಾಡಿತ್ತು.
ಇದಕ್ಕೂ ಮೊದಲು, ‘ಇರಾನ್‌ವೈರ್’ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಆಡಳಿತಕ್ಕೆ ನಿಕಟವಾಗಿರುವ ಮೂಲಗಳನ್ನು ಉಲ್ಲೇಖಿಸಿ ‘ದಿ ಜೆರುಸಲೆಮ್ ಪೋಸ್ಟ್’ ಕೂಡ ಖಾಮಿನೈ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿರುವುದಾಗಿ ವರದಿ ಮಾಡಿತ್ತು.
‘ದಿ ಜೆರುಸಲೆಮ್ ಪೋಸ್ಟ್’ ಉಲ್ಲೇಖಿಸಿದ ಒಂದು ಮೂಲ, ‘ಅವರು ಮೃತಪಟ್ಟಿರುವ ಸುದ್ದಿಯನ್ನು ನಾವು ಶೀಘ್ರದಲ್ಲೇ ಕೇಳಿದರೂ ಅಚ್ಚರಿಯಿಲ್ಲ’ ಎಂದು ಹೇಳಿತ್ತು.