ಅಮೆರಿಕದೊಂದಿಗೆ ಯಾವುದೇ ಮಾತುಕತೆಯಿಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ
ಅಬ್ಬಾಸ್ ಅರಾಘ್ಚಿ | Photo Credit : PTI , AP
ಟೆಹರಾನ್, ಆ. 9: ಅಮೆರಿಕದೊಂದಿಗಿನ ಮಾತುಕತೆಯನ್ನು ತಕ್ಷಣವೇ ಪುನರಾರಂಭಿಸುವುದನ್ನು ಇರಾನ್ ತಳ್ಳಿಹಾಕಿದೆ. ಶಾಂತಿ ಒಪ್ಪಂದದ ಉಲ್ಲಂಘನೆಯನ್ನು ಅಮೆರಿಕ ನಿಲ್ಲಿಸುವವರೆಗೆ ಮಾತುಕತೆ ಪುನರಾರಂಭಿಸಲು ಸಾಧ್ಯವಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
‘ನಾವು ಪ್ರಸ್ತುತ ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸುತ್ತಿಲ್ಲ. ಮಾತುಕತೆಯನ್ನು ಪುನರಾರಂಭಿಸಲು ಮಾರ್ಗಗಳನ್ನು ಹುಡುಕಲು ಮಧ್ಯಸ್ಥಗಾರರು ಇನ್ನೂ ಪ್ರಯತ್ನಿಸುತ್ತಿದ್ದಾರೆ. ಮಧ್ಯಸ್ಥಗಾರರ ಮೂಲಕ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಇದನ್ನು ‘ಮಾತುಕತೆ’ ಎಂದು ಕರೆಯುವುದಿಲ್ಲ, ಇದು ‘ಸಂದೇಶಗಳ ವಿನಿಮಯ’. ಸಾಮರಸ್ಯ ಒಪ್ಪಂದದ ಉಲ್ಲಂಘನೆಯನ್ನು ಅಮೆರಿಕ ನಿಲ್ಲಿಸುವವರೆಗೆ ಮತ್ತು ಆ ಉಲ್ಲಂಘನೆಗಳಿಗೆ ಪರಿಹಾರ ನೀಡುವವರೆಗೆ ಮಾತುಕತೆಗಳನ್ನು ಪುನರಾರಂಭಿಸುವುದನ್ನು ಇರಾನ್ ಪರಿಗಣಿಸುವುದಿಲ್ಲ’ ಎಂದು ಅರಾಘ್ಚಿ ಹೇಳಿದ್ದಾರೆ.
ಅಮೆರಿಕವು ಇರಾನ್ ನ ಎಲ್ಲಾ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲಾಗುವುದಿಲ್ಲ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ರವಿವಾರ ತಿಳಿಸಿದೆ. ಅಮೆರಿಕವು ತನ್ನ ‘ವರ್ತನೆಯನ್ನು ತಿದ್ದುಕೊಳ್ಳುವವರೆಗೆ’ ಜಲಮಾರ್ಗವನ್ನು ಮುಚ್ಚಿಡಲಾಗುವುದು ಎಂದು ಇರಾನ್ ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಪ್ರತ್ಯೇಕವಾಗಿ ತಿಳಿಸಿದೆ.