×
Ad

ಹಮಾಸ್ ಅನ್ನು ಕಾನೂನುಬದ್ಧ ರಾಜಕೀಯ ಆಂದೋಲನ ಎಂದು ಗುರುತಿಸಬೇಕು: ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬಾನೀಸ್

Update: 2025-08-19 18:53 IST

ಫ್ರಾನ್ಸೆಸ್ಕಾ ಅಲ್ಬಾನೀಸ್ | PC ;  X 

ಜೆರುಸಲೇಂ: ಹಮಾಸ್‌ ಅನ್ನು ಕೊಲೆಗಾರರ ಗುಂಪೆನ್ನುವುದಕ್ಕಿಂತ ಅದನ್ನು ಕಾನೂನುಬದ್ಧ ರಾಜಕೀಯ ಆಂದೋಲನ ಎಂದು ಗುರುತಿಸಬೇಕು ಎಂದು ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬಾನೀಸ್ ಅವರು ರವಿವಾರ ಒತ್ತಿ ಹೇಳಿದ್ದಾರೆ. ಹಮಾಸ್ ಗಾಝಾ ಪಟ್ಟಿಯಲ್ಲಿ ಮಹತ್ವದ ಆಡಳಿತಾತ್ಮಕ ಮತ್ತು ಸೇವಾ ಪಾತ್ರವನ್ನು ವಹಿಸಿದೆ ಎಂದು ಬೆಟ್ಟು ಮಾಡಿರುವ ಅವರು, ಫೆಲೆಸ್ತೀನ್‌ನಲ್ಲಿ ಮಾತ್ರವಲ್ಲ, ಈ ಪ್ರದೇಶದಲ್ಲಿಯೇ ಅತ್ಯಂತ ಪ್ರಜಾಸತ್ತಾತ್ಮಕ ಚುನಾವಣೆಗಳಲ್ಲಿ ಗೆದ್ದ ಬಳಿಕ ಹಮಾಸ್ ಅಧಿಕಾರಕ್ಕೆ ಬಂದಿದೆ ಎಂದೂ ಪ್ರತಿಪಾದಿಸಿದ್ದಾರೆ.

ಹಲವಾರು ವ್ಯಕ್ತಿಗಳು ಹಮಾಸ್‌ನ ಪಾತ್ರದ ಬಗ್ಗೆ ನಿಜವಾದ ತಿಳುವಳಿಕೆಯಿಲ್ಲದೆ ಅದರ ಕುರಿತು ಮುಖ್ಯವಾಹಿನಿಯ ನಿರೂಪಣೆಗಳನ್ನು ಪುನರಾವರ್ತಿಸುತ್ತಿದ್ದಾರೆ ಎಂದು ಹೇಳಿದ ಅವರು, ಹಮಾಸ್ ಗಾಝಾದಲ್ಲಿ ಶಾಲೆಗಳು, ಸಾರ್ವಜನಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿದೆ ಹಾಗೂ ಗಾಝಾದಲ್ಲಿ ತನ್ನನ್ನು ಕಾರ್ಯತಃ ಪ್ರಾಧಿಕಾರವಾಗಿ ರೂಪಿಸಿಕೊಂಡಿದೆ ಎಂದು ಎತ್ತಿ ತೋರಿಸಿದರು.

ಹಮಾಸ್‌ ಅನ್ನು ಉಗ್ರಗಾಮಿಗಳ ಗುಂಪು ಎಂದು ಬಿಂಬಿಸುವುದನ್ನು ತಿರಸ್ಕರಿಸಿದ ಅಲ್ಬಾನೀಸ್,ವಿವಿಧ ನಿರೂಪಣೆಗಳು ಚಿತ್ರಿಸಿರುವಂತೆ ಹಮಾಸ್ ಕೊಲೆಗಾರರ ಅಥವಾ ಭಾರೀ ಶಸ್ತ್ರಸಜ್ಜಿತ ಹೋರಾಟಗಾರರ ಗುಂಪಲ್ಲ ಎಂದು ಹೇಳಿದರು.

ಪ್ರಮುಖ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ 60ಕ್ಕೂ ಅಧಿಕ ಅಂತರರಾಷ್ಟ್ರೀಯ ಸಂಸ್ಥೆಗಳು ಗಾಝಾದಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತಿವೆ ಮತ್ತು ಪಶ್ಚಿಮ ದಂಡೆಯಲ್ಲಿ ವಸಾಹತು ನಿರ್ಮಾಣಗಳನ್ನು ಬೆಂಬಲಿಸುತ್ತಿವೆ ಎಂದು ಆಲ್ಬಾನೀಸ್ ಈ ಹಿಂದೆ ಆರೋಪಿಸಿದ್ದರು.

ಗಾಝಾದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಪ್ರಾಥಮಿಕವಾಗಿ ಲಾಭದ ಉದ್ದೇಶಗಳಿಂದ ಪ್ರೇರಿತ ‘ಜನಾಂಗೀಯ ಹತ್ಯೆಯ ಅಭಿಯಾನ’ ಎಂದು ಬಣ್ಣಿಸಿದ ಅವರು,ಇಸ್ರೇಲ್ ಜೊತೆ ತಮ್ಮ ವ್ಯವಹಾರಗಳನ್ನು ನಿಲ್ಲಿಸುವಂತೆ ಅಂತರರಾಷ್ಟ್ರೀಯ ಕಂಪನಿಗಳನ್ನು ಆಗ್ರಹಿಸಿದರು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನಡಿ ಅವುಗಳ ಸಿಇಒಗಳ ಉತ್ತರದಾಯಿತ್ವಕ್ಕೆ ಕರೆ ನೀಡಿದರು.

ಗಾಝಾದಲ್ಲಿ ಜೀವಗಳು ಬಲಿಯಾಗುತ್ತಿರುವ ಮತ್ತು ಪಶ್ಚಿಮ ದಂಡೆಯಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಈ ಸಮಯದಲ್ಲಿ ಈ ವರದಿಯು ಇಸ್ರೇಲ್‌ನ ನರಮೇಧ ಮುಂದುವರಿದಿರುವುದಕ್ಕೆ ನಿರ್ಣಾಯಕ ಕಾರಣವನ್ನು ಎತ್ತಿ ತೋರಿಸುತ್ತದೆ; ಈ ನರಮೇಧವು ಅದರಲ್ಲಿ ಭಾಗಿಯಾಗಿರುವ ಅನೇಕರಿಗೆ ಲಾಭದಾಯಕವಾಗಿದೆ ಎಂದೂ ಅಲ್ಬಾನೀಸ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News