ಟ್ರಂಪ್ ಯೋಜನೆಗೆ ಭಾಗಶಃ ಸಮ್ಮತಿ ಸೂಚಿಸಿದ ಹಮಾಸ್ | ಇಸ್ರೇಲ್ ನ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ
PC | PTI
ದೋಹಾ: ಗಾಝಾ ಯುದ್ಧ ಅಂತ್ಯಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಡಿಸಿದ 20 ಅಂಶಗಳ ಯೋಜನೆಗೆ ಹಮಾಸ್ ಶುಕ್ರವಾರ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಝಾದ ಆಡಳಿತ ಹಸ್ತಾಂತರಿಸುವಂತಹ ಕೆಲವು ಅಂಶಗಳಿಗೆ ಒಪ್ಪಿಗೆ ಸೂಚಿಸಿದ ಹಮಾಸ್, ಉಳಿದ ಪ್ರಮುಖ ಷರತ್ತುಗಳ ಕುರಿತು ಮಾತುಕತೆ ನಡೆಸಬೇಕಿದೆ ಎಂದು ಸ್ಪಷ್ಟಪಡಿಸಿದೆ.
ಟ್ರಂಪ್ ಅವರ ಯೋಜನೆಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಗಡುವನ್ನು ಹಮಾಸ್‌ಗೆ ಈ ರವಿವಾರವರೆಗೆ ನಿಗದಿಪಡಿಸಲಾಗಿತ್ತು.
ಆದರೆ ಹಮಾಸ್ ಕೇಳಿದಂತೆ ಈ ನಿಯಮಗಳು ಮಾತುಕತೆಗೆ ಒಳಪಡುವುದೇ ಎಂಬುದರ ಕುರಿತು ಟ್ರಂಪ್ ಯಾವುದೇ ಸ್ಪಷ್ಟನೆ ನೀಡಿಲ್ಲ.
ಗಮನಾರ್ಹವಾಗಿ, ಹಮಾಸ್ ತನ್ನ ನಿಶಸ್ತ್ರೀಕರಣದ ಬೇಡಿಕೆಗೆ ಸ್ಪಷ್ಟ ಉತ್ತರ ನೀಡಿಲ್ಲ. ಇಸ್ರೇಲ್ ಹಾಗೂ ಅಮೆರಿಕಕ್ಕೆ ಅತಿ ಪ್ರಮುಖವಾಗಿರುವ ಈ ಅಂಶದ ಕುರಿತು ಹಮಾಸ್ ಮೌನ ತಾಳಿದೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಹಮಾಸ್, “ಗಾಝಾ ಪಟ್ಟಿಯ ಮೇಲಿನ ಯುದ್ಧವನ್ನು ಅಂತ್ಯಗೊಳಿಸಲು, ಒತ್ತೆಯಾಳುಗಳ ವಿನಿಮಯ ಜಾರಿಗೆ ತರಲು ಮತ್ತು ತಕ್ಷಣದ ಮಾನವೀಯ ನೆರವು ಒದಗಿಸಲು ನಡೆಯುತ್ತಿರುವ ಅರಬ್, ಇಸ್ಲಾಮಿಕ್ ಹಾಗೂ ಅಂತರರಾಷ್ಟ್ರೀಯ ಪ್ರಯತ್ನಗಳ ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳನ್ನು ನಾವು ಶ್ಲಾಘಿಸುತ್ತೇವೆ” ಎಂದು ತಿಳಿಸಿದೆ.
“ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಾವು ಸಿದ್ಧರಾಗಿದ್ದೇವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ವಿನಿಮಯ ಸೂತ್ರದ ಪ್ರಕಾರ ಈ ಪ್ರಕ್ರಿಯೆಯನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ” ಎಂದು ಹಮಾಸ್ ತನ್ನ ಘೋಷಣೆಯಲ್ಲಿ ತಿಳಿಸಿದೆ.
ಈ ಕುರಿತ ವಿವರಗಳನ್ನು ಚರ್ಚಿಸಲು ಮಧ್ಯವರ್ತಿಗಳ ಮೂಲಕ ತಕ್ಷಣ ಮಾತುಕತೆಗೆ ನಡೆಸಲು ಹಮಾಸ್ ಸಿದ್ಧವಿದೆ ಎಂದು ಹೇಳಿದೆ. ಜೊತೆಗೆ, “ಫೆಲೆಸ್ತೀನ್ ನ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅರಬ್-ಇಸ್ಲಾಮಿಕ್ ಬೆಂಬಲದೊಂದಿಗೆ ಗಾಝಾದ ಆಡಳಿತವನ್ನು ಫೆಲೆಸ್ತೀನ್ ನ ಸ್ವತಂತ್ರ ಸಂಸ್ಥೆಗೆ ಹಸ್ತಾಂತರಿಸಲು ಸಿದ್ಧವಿದ್ದೇವೆ” ಎಂದು ಹಮಾಸ್ ತಿಳಿಸಿದೆ.
ಈ ಬೆಳವಣಿಗೆಗೆ ಸಂಬಂಧಿಸಿದಂತೆ ಶ್ವೇತಭವನವು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟ್ರಂಪ್ ಅವರ ಯೋಜನೆಯ ಪ್ರಮುಖ ಅಂಶಗಳಲ್ಲಿ ತಕ್ಷಣದ ಕದನ ವಿರಾಮ, ಹಮಾಸ್ ಸೆರೆಯಲ್ಲಿರುವ ಒತ್ತೆಯಾಳುಗಳು ಮತ್ತು ಇಸ್ರೇಲ್ ಬಂಧಿಸಿರುವ ಫೆಲೆಸ್ತೀನ್ ಕೈದಿಗಳ ವಿನಿಮಯ, ಹಂತಹಂತವಾಗಿ ಇಸ್ರೇಲ್ ಪಡೆಗಳನ್ನು ಗಾಝಾದಿಂದ ವಾಪಾಸ್ ಪಡೆದುಕೊಳ್ಳುವುದು, ಹಮಾಸ್ ನ ನಿಶಸ್ತ್ರೀಕರಣ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ನೇತೃತ್ವದಲ್ಲಿ ತಾತ್ಕಾಲಿಕ ಸರ್ಕಾರ ರಚನೆ ಸೇರಿವೆ.