×
Ad

ಹಮಾಸ್-ಇಸ್ರೇಲ್‌ ನಿಂದ ಒತ್ತೆಯಾಳು ಕೈದಿಗಳ ಪಟ್ಟಿ ವಿನಿಮಯ

Update: 2025-10-08 22:27 IST

Photo Credit : NDTV

ಗಾಝಾ,ಅ.8: ವಿನಿಮಯ ಒಪ್ಪಂದದಡಿ ಬಿಡುಗಡೆಗೊಳಿಸಲಾಗುವ ಇಸ್ರೇಲಿ ಒತ್ತೆಯಾಳುಗಳು ಹಾಗೂ ಫೆಲೆಸ್ತೀನ್ ಕೈದಿಗಳ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿರುವುದಾಗಿ ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ಬುಧವಾರ ತಿಳಿಸಿದೆ.

ಗಾಝಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಕುರಿತಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯ ಕುರಿತು ಈಜಿಪ್ಟ್‌ ನಲ್ಲಿ ನಡೆಯುತ್ತಿರುವ ಮಾತುಕತೆಯ ಬಗ್ಗೆ ತಾನು ಆಶಾವಾದವನ್ನು ಹೊಂದಿರುವುದಾಗಿ ಅದು ಹೇಳಿದೆ.

ಗಾಝಾ ಸಂಘರ್ಷವನ್ನು ಅಂತ್ಯಗೊಳಿಸುವ ಕಾರ್ಯವಿಧಾನ, ಗಾಝಾದಿಂದ ಇಸ್ರೇಲಿ ಪಡೆಗಳ ಹಿಂತೆಗೆತ ಹಾಗೂ ಇಸ್ರೇಲಿ ಒತ್ತೆಯಾಳುಗಳು ಹಾಗೂ ಫೆಲೆಸ್ತೀನ್ ಕೈದಿಗಳ ವಿನಿಮಯ ಒಪ್ಪಂದ ಈ ವಿಷಯಗಳ ಬಗ್ಗೆ ಮಾತುಕತೆಯು ಹೆಚ್ಚು ಗಮನಹರಿಸಲಾಗುತ್ತಿದೆಯೆಂದು ಹಮಾಸ್ ಹೇಳಿಕೆ ತಿಳಿಸಿದೆ.

ಈಜಿಪ್ಟ್‌ ನ ವಿಹಾರಪಟ್ಟಣವಾದ ಶರ್ಮ್ ಅಲ್ ಶೇಖ್‌ ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ, ಗಾಝಾ ಸಂಘರ್ಷ ಅಂತ್ಯಕ್ಕೆ ಟ್ರಂಪ್ ಅವರು ರೂಪಿಸಿರುವ 20 ಅಂಶಗಳ ಉಪಕ್ರಮದ ಮೊದಲನೇ ಹಂತವನ್ನು ಜಾರಿಗೊಳಿಸುವ ಸಮಯದ ಬಗ್ಗೆ ಈವರೆಗೆ ನಿರ್ಧಾರಕ್ಕೆ ಬರಲಾಗಿಲ್ಲವೆಂದು ತಿಳಿದುಬಂದಿದೆ.

ಶಾಂತಿ ಒಪ್ಪಂದವು ಏರ್ಪಡುವ ಬಗ್ಗೆ ಟ್ರಂಪ್ ಅವರು ಗಾಝಾದಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಘರ್ಷದ ಎರಡನೇ ವರ್ಷಾಚರಣೆಯ ದಿನವಾದ ಮಂಗಳವಾರ ಆಶಾವಾದ ವ್ಯಕ್ತಪಡಿಸಿದ್ದರು.

ಶರ್ಮ್ ಅಲ್ ಶೇಖ್‌ ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಪಾಲ್ಗೊಂಡಿರುವ ಅಮೆರಿಕದ ನಿಯೋಗದಲ್ಲಿ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್ ಹಾಗೂ ಟ್ರಂಪ್ ಅವರ ಅಳಿಯ ಜರೇಡ್ ಕುಶ್ನರ್ ಅವರೂ ಕೂಡಾ ಇದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಕುಶ್ನರ್ ಅವರು ಅಮೆರಿಕ ಆಡಳಿತದ ಮಧ್ಯಪ್ರಾಚ್ಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು.

ಬುಧವಾರ ನಡೆದ ಮಾತುಕತೆಯಲ್ಲಿ ಇಸ್ರೇಲಿನ ಆಯಕಟ್ಟಿನ ವ್ಯವಹಾರಗಳ ಸಚಿವ, ಪ್ರಧಾನಿ ನೆತನ್ಯಾಹು ಅವರ ನಿಕಟವರ್ತಿ ರಾನ್ ಡೆರ್ಮರ್ ಭಾಗವಹಿಸಿದ್ದರು. ಕತರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್‌ ರಹಮಾನ್ ಅಲ್-ಥಾನಿ, ಟರ್ಕಿಯ ಹಿರಿಯ ಬೇಹುಗಾರಿಕಾ ಅಧಿಕಾರಿ ಇಬ್ರಾಹೀಂ ಕಾಲಿನ್ ಕೂಡಾ ಪಾಲ್ಗೊಂಡಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News