ಗಾಝಾ ಯೋಜನೆಯಲ್ಲಿ ನಿಶ್ಯಸ್ತ್ರೀಕರಣ ಷರತ್ತಿಗೆ ಹಮಾಸ್ ವಿರೋಧ : ವರದಿ
Photo Credit: aljazeera.com
ಗಾಝಾ, ಅ.2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಝಾ ಶಾಂತಿ ಯೋಜನೆಯಲ್ಲಿನ ನಿಶ್ಯಸ್ತ್ರೀಕರಣ ಷರತ್ತಿಗೆ ತಿದ್ದುಪಡಿಯಾಗಬೇಕೆಂದು ಹಮಾಸ್ ಬಯಸಿರುವುದಾಗಿ ಫೆಲೆಸ್ತೀನ್‍ನ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಹಮಾಸ್ ಸಮಾಲೋಚಕರು ಮಂಗಳವಾರ ದೋಹಾದಲ್ಲಿ ಟರ್ಕಿ, ಈಜಿಪ್ಟ್ ಮತ್ತು ಖತರ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಶಾಂತಿ ಯೋಜನೆ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಲು ಕನಿಷ್ಠ ಮೂರು ದಿನಗಳ ಅಗತ್ಯವಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆಂಬಲಿಸಿರುವ ಟ್ರಂಪ್ ಅವರ ಯೋಜನೆಯು ಒಪ್ಪಂದಕ್ಕೆ ಸಮ್ಮತಿಸಿದ 72 ಗಂಟೆಗಳೊಳಗೆ ಹಮಾಸ್‍ನ ಒತ್ತೆ ಸೆರೆಯಲ್ಲಿ ಇರುವವರ ಬಿಡುಗಡೆ, ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಡುವುದು ಮತ್ತು ಗಾಝಾದಿಂದ ಕ್ರಮೇಣ ಇಸ್ರೇಲ್‍ನ ವಾಪಸಾತಿ ಸೇರಿದಂತೆ 20 ಅಂಶಗಳನ್ನು ಹೊಂದಿದೆ. ಆದರೆ ನಿಶ್ಯಸ್ತ್ರೀಕರಣ, ಹಮಾಸ್ ಹಾಗೂ ಇತರ ಬಣಗಳ ಸದಸ್ಯರನ್ನು ಗಾಝಾದಿಂದ ಹೊರಹಾಕುವುದು ಸೇರಿದಂತೆ ಕೆಲವು ಅಂಶಗಳಲ್ಲಿ ತಿದ್ದುಪಡಿಯನ್ನು ಹಮಾಸ್ ಬಯಸಿದೆ. ಗಾಝಾ ಪಟ್ಟಿಯಿಂದ ಇಸ್ರೇಲ್ ಸಂಪೂರ್ಣವಾಗಿ ಹಿಂದೆ ಸರಿಯುವುದಕ್ಕೆ ಅಂತರಾಷ್ಟ್ರೀಯ ಖಾತರಿ, ಪ್ರದೇಶದ ಒಳಗೆ ಅಥವಾ ಹೊರಗೆ ಯಾವುದೇ ಹತ್ಯೆ ನಡೆಯುವುದಿಲ್ಲ ಎಂಬ ಖಾತರಿಗೆ ಹಮಾಸ್ ಆಗ್ರಹಿಸಿದ್ದು ಇತರ ಪ್ರಾದೇಶಿಕ ಮತ್ತು ಅರಬ್ ಪಕ್ಷಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಫೆಲೆಸ್ತೀನಿಯನ್ ಮೂಲ ಹೇಳಿದೆ.
ಮತ್ತೊಂದು ಮೂಲಗಳ ಪ್ರಕಾರ, ಟ್ರಂಪ್ ಅವರ ಯೋಜನೆಯ ಕುರಿತು ಹಮಾಸ್ ಗುಂಪಿನೊಳಗೆ ಎರಡು ಅಭಿಪ್ರಾಯಗಳು ಮೂಡಿವೆ. ಒಂದು ಬಣವು ಯೋಜನೆಯನ್ನು ಬೇಷರತ್ತಾಗಿ ಬೆಂಬಲಿಸುವ ಬಗ್ಗೆ ಒಲವು ತೋರಿದೆ ಎಂದು ವರದಿಯಾಗಿದೆ.