ಇಸ್ರೇಲ್ ನಿಂದ ಗಾಝಾ ಮೇಲೆ ತೀವ್ರ ದಾಳಿ : ಹಮಾಸ್ ನಿಂದ 48 ಒತ್ತೆಯಾಳುಗಳ ‘ವಿದಾಯ ಚಿತ್ರ’ ಬಿಡುಗಡೆ!
PC | aljazeera
ಗಾಝಾ: ಗಾಝಾ ಪಟ್ಟಣದ ಅತಿದೊಡ್ಡ ನಗರ ಕೇಂದ್ರವನ್ನು ಇಸ್ರೇಲ್ ಸೇನೆ ಭಾರೀ ವಾಯು ಹಾಗೂ ಪದಾತಿದಳಗಳ ದಾಳಿಗಳ ಮೂಲಕ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಂದರ್ಭದಲ್ಲಿ, ಹಮಾಸ್ ನ ಸಶಸ್ತ್ರ ವಿಭಾಗ ಕಸ್ಸಾಮ್ ಬ್ರಿಗೇಡ್ ಶನಿವಾರ ಗಾಝಾದಲ್ಲಿ ಒತ್ತೆಯಾಳುಗಳಾಗಿರುವ ಇಸ್ರೇಲಿನ 48 ಒತ್ತೆಯಾಳುಗಳ “ವಿದಾಯ ಚಿತ್ರ”ವನ್ನು ಬಿಡುಗಡೆ ಮಾಡಿದೆ ಎಂದು Aljazeera ವರದಿ ಮಾಡಿದೆ
ಹಮಾಸ್ ಬಿಡುಗಡೆ ಮಾಡಿದ ಈ ಚಿತ್ರವನ್ನು “ರಾನ್ ಅರಾದ್” ಎಂದು ಹೆಸರಿಸಲಾಗಿದ್ದು, 1986ರಲ್ಲಿ ಲೆಬನಾನ್ ನಲ್ಲಿ ಕಾಣೆಯಾದ ಇಸ್ರೇಲಿ ವಾಯುಪಡೆಯ ನಾಯಕನನ್ನು ನೆನಪಿಸಿದೆ.
ದಕ್ಷಿಣ ಲೆಬನಾನ್ ಮೇಲಿನ ದಾಳಿಯ ಸಂದರ್ಭದಲ್ಲಿ ಇಸ್ರೇಲಿ ವಾಯುಪಡೆಯ ನಾಯಕ ಅರಾದ್ ಇದ್ದ ಎಫ್-4 ಫ್ಯಾಂಟಮ್ ವಿಮಾನವು ಬಾಂಬ್ ದಾಳಿಯಿಂದ ಪತನವಾದ ಬಳಿಕ, ಅರಾದ್ ನನ್ನು ಅಮಲ್ ಮೂವ್‌ಮೆಂಟ್ ಕೈಗೆ ಸಿಕ್ಕು ಹಿಜ್ಬುಲ್ಲಾ ಗೆ ಹಸ್ತಾಂತರ ಮಾಡಲಾಗಿತ್ತು. ಅರಾದ್ ಜೀವಿತದ ಬಗ್ಗೆ ನಿರ್ಣಾಯಕ ಪುರಾವೆ ಸಿಕ್ಕಿಲ್ಲದಿದ್ದರೂ, ಆತ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ. ಹಮಾಸ್ ಇದೀಗ ಅದೇ ನಾಮಧೇಯವನ್ನು ಬಳಸಿ ಇಸ್ರೇಲಿ ಒತ್ತೆಯಾಳುಗಳ ಭವಿಷ್ಯದ ಬಗ್ಗೆ ಗಂಭೀರ ಸಂದೇಶ ಕಳುಹಿಸಿದೆ.
“ನೆತನ್ಯಾಹು ಅವರ ನಿರಾಕರಣೆ ಮತ್ತು ಜಮೀರ್ ಅವರ ಶರಣಾಗತಿಯಿಂದಾಗಿ, ಗಾಝಾ ನಗರದಲ್ಲಿ ಸೈನಿಕ ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆ ವಿದಾಯ ಚಿತ್ರ” ಎಂದು ಚಿತ್ರದೊಂದಿಗೆ ಹಮಾಸ್ ಪ್ರಕಟಣೆ ನೀಡಿದೆ.
ಈ ಮೂಲಕ ಹಮಾಸ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯಾವುದೇ ಒಪ್ಪಂದವನ್ನು ತಿರಸ್ಕರಿಸಿರುವುದನ್ನು ಹಾಗೂ ಸೇನಾ ಮುಖ್ಯಸ್ಥ ಇಯಾಲ್ ಜಮೀರ್ ನೇತೃತ್ವದಲ್ಲಿ ದಾಳಿಗಳು ತೀವ್ರಗೊಂಡಿರುವುದನ್ನು ಉಲ್ಲೇಖಿಸಿದೆ.
ಇಸ್ರೇಲ್ ಅಧಿಕಾರಿಗಳ ಪ್ರಕಾರ ಗಾಝಾದಲ್ಲಿ ಒತ್ತೆಯಾಳಾಗಿರುವವರಲ್ಲಿ ಸುಮಾರು 20 ಮಂದಿ ಜೀವಂತವಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಸಂಖ್ಯೆ 20 ಕ್ಕಿಂತ ಕಡಿಮೆಯಾಗಿರಬಹುದು ಎಂದು ಹೇಳಿದ್ದಾರೆ.
ನೆತನ್ಯಾಹು ಮತ್ತು ಟ್ರಂಪ್ ಇಬ್ಬರೂ, ಎಲ್ಲ ಜೀವಂತ ಮತ್ತು ಮೃತಪಟ್ಟ ಒತ್ತೆಯಾಳುಗಳನ್ನು ಮರಳಿ ತರಲಾಗುವುದು ಹಾಗೂ ಹಮಾಸ್ ಅನ್ನು ಸಂಪೂರ್ಣವಾಗಿ ನಾಶಮಾಡಲಾಗುವುದು ಎಂದು ಮತ್ತೆ ಮತ್ತೆ ಘೋಷಿಸಿದ್ದಾರೆ.
ಇಸ್ರೇಲ್ ನಡೆಸುತ್ತಿರುವ ವಾಯು ಹಾಗೂ ಪದಾತಿ ದಳದ ದಾಳಿಗಳು ಬಂಧಿತರ ಜೀವಕ್ಕೆ ನೇರ ಅಪಾಯವಾಗುತ್ತದೆ ಎಂದು ಹಮಾಸ್ ಪುನಃ ಎಚ್ಚರಿಸಿದೆ. ಅವರ ಪ್ರಕಾರ, ಕೆಲ ಒತ್ತೆಯಾಳುಗಳು ಈಗಾಗಲೇ ಇಸ್ರೇಲಿನ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.
“ಒತ್ತೆಯಾಳುಗಳು ಗಾಝಾ ನಗರದ ವಿವಿಧ ಪ್ರದೇಶಗಳಲ್ಲಿದ್ದಾರೆ” ಎಂದು ಹಮಾಸ್ ತಿಳಿಸಿದೆ.
ಹಮಾಸ್ ಪ್ರಕಟಣೆಯ ನಂತರ ಇಸ್ರೇಲ್ ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಲಕ್ಷಾಂತರ ಜನರು ಮತ್ತೆ ಟೆಲ್ ಅವೀವ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎನ್ನಲಾಗಿದೆ. ಯುದ್ಧವನ್ನು ಕೊನೆಗೊಳಿಸಿ, ಒತ್ತೆಯಾಳುಗಳನ್ನು ತಕ್ಷಣ ಮತ್ತು ಸುರಕ್ಷಿತವಾಗಿ ಹಿಂತಿರುಗಿಸುವಂತೆ ಒತ್ತಾಯಿಸಲಾಗುತ್ತಿದೆ.
ಇದಕ್ಕೂ ಮೊದಲು ಹಮಾಸ್ ಇಬ್ಬರು ಇಸ್ರೇಲಿ ಒತ್ತೆಯಾಳುಗಳ ವೀಡಿಯೊವನ್ನು ಬಿಡುಗಡೆ ಮಾಡಿತ್ತು. ಆ ದೃಶ್ಯಗಳಲ್ಲಿ ದುರ್ಬಲ ಸ್ಥಿತಿಯಲ್ಲಿದ್ದ ಬಂಧಿತರಲ್ಲಿ ಒಬ್ಬನು ತನ್ನದೇ ಸಮಾಧಿಯನ್ನು ತೋಡುತ್ತಿರುವುದಾಗಿ ತೋರಿಸಲಾಗಿತ್ತು. ಈ ದೃಶ್ಯಗಳು ಬಂಧಿತರ ಕುಟುಂಬಗಳಲ್ಲಿಯೂ, ಇಸ್ರೇಲಿ ಸರ್ಕಾರದಲ್ಲಿಯೂ ಹಾಗೂ ಅಮೆರಿಕ ಸೇರಿದಂತೆ ಇಸ್ರೇಲ್ ಮಿತ್ರ ರಾಷ್ಟ್ರಗಳಲ್ಲಿಯೂ ಆಕ್ರೋಶ ಹುಟ್ಟಿಸಿತ್ತು.
ಫೆಲೆಸ್ತೀನಿನ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 2023ರಲ್ಲಿ ಯುದ್ಧ ಪ್ರಾರಂಭವಾದ ನಂತರದಿಂದ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಕನಿಷ್ಠ 65,208 ಫೆಲೆಸ್ತೀನಿಯರು ಮೃತಪಟ್ಟು, 1,66,271 ಮಂದಿ ಗಾಯಗೊಂಡಿದ್ದಾರೆ. ಮಾರ್ಚ್ 18ರಂದು ಇಸ್ರೇಲ್ ಹಮಾಸ್ ಜೊತೆಗಿನ ಕದನ ವಿರಾಮವನ್ನು ಮುರಿದ ನಂತರದಿಂದಲೇ 12,653 ಜನರು ಮೃತಪಟ್ಟು, 54,230 ಮಂದಿ ಗಾಯಗೊಂಡಿದ್ದಾರೆ.
ಗಾಝಾದ ಮಾನವೀಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಹಮಾಸ್ ಬಿಡುಗಡೆ ಮಾಡಿದ ಇತ್ತೀಚಿನ ಚಿತ್ರ ಹಾಗೂ ಸಂದೇಶದಿಂದಾಗಿ ಒತ್ತೆಯಾಳುಗಳ ಭವಿಷ್ಯದ ಬಗ್ಗೆ ಗಂಭೀರ ಆತಂಕ ಹೆಚ್ಚಿದೆ. ಇಸ್ರೇಲ್-ಹಮಾಸ್ ನಡುವಿನ ಯುದ್ಧ ಇನ್ನಷ್ಟು ಉಗ್ರ ಸ್ವರೂಪ ಪಡೆದುಕೊಳ್ಳುವ ಆತಂಕ ಹೆಚ್ಚಾಗಿದೆ.