ಟ್ರಂಪ್ ಶಾಂತಿ ಸಭೆಗೂ ಮುನ್ನ ಒತ್ತೆಯಾಳುಗಳ ಬಿಡುಗಡೆ: ಹಮಾಸ್
ಸಾಂದರ್ಭಿಕ ಚಿತ್ರ - Photo : PTI
ಗಾಝಾ, ಅ.12: ಈಜಿಪ್ಟ್ ನಲ್ಲಿ ಸೋಮವಾರ ಅಪರಾಹ್ನ ನಡೆಯಲಿರುವ, ಅಮೆರಿಕ ಅಧ್ಯಕ್ಷ ಟ್ರಂಪ್ ಅಧ್ಯಕ್ಷತೆಯ ಅಂತರಾಷ್ಟ್ರೀಯ ಶೃಂಗಸಭೆಗೂ ಮುನ್ನ ಗಾಝಾದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಹಮಾಸ್ ಮೂಲಗಳು ರವಿವಾರ ಹೇಳಿವೆ.
ಗಾಝಾ ಶಾಂತಿ ಒಪ್ಪಂದದ ಪ್ರಥಮ ಹಂತದಲ್ಲಿ ಹಮಾಸ್ ಇಸ್ರೇಲ್ ನ 20 ಒತ್ತೆಯಾಳುಗಳನ್ನು ಮತ್ತು ಇಸ್ರೇಲ್ ಸುಮಾರು 2000 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆಗೊಳಿಸಲಿವೆ.
`ಸಹಿ ಹಾಕಲಾದ ಒಪ್ಪಂದದ ಪ್ರಕಾರ ಕೈದಿಗಳ ವಿನಿಮಯ ಪ್ರಕ್ರಿಯೆ ಸೋಮವಾರ ಬೆಳಿಗ್ಗೆ ಆರಂಭಗೊಳ್ಳಲಿದೆ. ಆದರೆ ಗಾಝಾ ಶಾಂತಿ ಯೋಜನೆಯ ಕೆಲವು ಅಂಶಗಳನ್ನು ನಾವು ಒಪ್ಪದ ಕಾರಣ ಈಜಿಪ್ಟ್ ನಲ್ಲಿ ನಡೆಯುವ ಅಧಿಕೃತ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ' ಎಂದು ಹಮಾಸ್ ಅಧಿಕಾರಿ ಒಸಾಮಾ ಹಮ್ದನ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಹಮಾಸ್ ಸದಸ್ಯರು ಗಾಝಾ ಪಟ್ಟಿಯಿಂದ ಸ್ಥಳಾಂತರಗೊಳ್ಳಬೇಕು ಎಂಬ ಅಂಶ `ಅಸಂಬದ್ಧವಾಗಿದೆ'. ಹಮಾಸ್ ನಾಯಕರು ಫೆಲೆಸ್ತೀನೀಯರೇ ಆಗಿದ್ದಾರೆ. ತಾವು ಹಲವು ವರ್ಷಗಳಿಂದ ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಿದ್ದ ಭೂಮಿಯನ್ನು ತೊರೆದು ಬೇರೆಡೆ ಸ್ಥಳಾಂತರಗೊಳ್ಳಬೇಕೆಂದು ಸೂಚಿಸುವುದಕ್ಕೆ ಅರ್ಥವೇ ಇಲ್ಲ. ಇದರ ಜೊತೆಗೆ ಶಸ್ತ್ರಾಸ್ತ್ರ ಕೆಳಗಿಡಬೇಕೆಂಬ ಷರತ್ತಿಗೂ ನಮ್ಮ ಸಮ್ಮತಿಯಿಲ್ಲ. ಯಾಕೆಂದರೆ ಈ ಶಸ್ತ್ರಾಸ್ತ್ರಗಳು ಸಂಪೂರ್ಣ ಫೆಲೆಸ್ತೀನೀ ಜನರ ಆಯುಧಗಳಾಗಿವೆ' ಎಂದವರು ಹೇಳಿರುವುದಾಗಿ ವರದಿಯಾಗಿದೆ.