×
Ad

ಇರಾನ್‌ ನ ಅಣುಸ್ಥಾವರಗಳನ್ನು ನಾಶಪಡಿಸುವಲ್ಲಿ ಅಮೆರಿಕ ವಿಫಲ?

Update: 2025-06-25 22:39 IST

PC | PTI

ನ್ಯೂಯಾರ್ಕ್: ಇರಾನ್‌ ನ ಅಣುಶಕ್ತಿ ಕಾರ್ಯಕ್ರಮವನ್ನು ತಾನು ಸಂಪೂರ್ಣವಾಗಿ ನಾಶಪಡಿಸಿದ್ದೇನೆಂಬ ಅಮೆರಿಕದ ಘೋಷಣೆಯು ಹುಸಿಯೆಂದು, ಆ ದೇಶದ ರಕ್ಷಣಾ ಕಾರ್ಯಾಲಯವಾದ ಪೆಂಟಗಾನ್‌ ನ ಬೇಹುಗಾರಿಕಾ ಮೂಲಗಳು ವಿಶ್ಲೇಷಿಸಿವೆಯೆಂದು ವರದಿಗಳು ತಿಳಿಸಿವೆ.

ಇರಾನ್‌ ನ ಸಂವರ್ಧಿತ ಯುರೇನಿಯಂ ದಾಸ್ತಾನನ್ನು ನಾಶಪಡಿಸಲು ಶನಿವಾರ ಅಮೆರಿಕ ನಡೆಸಿದ ದಾಳಿಯು ವಿಫಲಗೊಂಡಿದೆಯೆಂದು ಬಿಬಿಸಿ ಸುದ್ದಿಸಂಸ್ಥೆಯ ಅಮೆರಿಕನ್ ಪಾಲುದಾರ ಸಿಬಿಎಸ್ ಬಹಿರಂಗಪಡಿಸಿದೆ. ಇರಾನ್‌ ನ ಅಣುಸ್ಥಾವರಗಳನ್ನು ನಾಶಗೊಂಡಿಲ್ಲವೆಂಬ ಬೇಹುಗಾರಿಕಾ ವರದಿಯು ಸೋರಿಕೆಯಾಗಿರುವುದು ಅಮೆರಿಕ ಆಡಳಿತಕ್ಕೆ ಮುಜುಗರವನ್ನುಂಟು ಮಾಡಿದೆ.

ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ ನ ಅಣುಸ್ಥಾವರಗಳು ನಾಶಗೊಂಡಿಲ್ಲವೆಂಬ ಬೇಹುಗಾರಿಕಾ ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇರಾನ್‌ ನ ಅಣುಶಕ್ತಿ ಸ್ಥಾವರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಹಾಗೂ ಇತಿಹಾಸದಲ್ಲೇ ಅತ್ಯಂತ ಯಶಸ್ವಿಯಾಗಿ ನಡೆದಂತಹ ಈ ಸೇನಾ ಕಾರ್ಯಾಚರಣೆಯ ಕೀರ್ತಿಗೆ ಮಸಿ ಬಳಿಯಲು ಯತ್ನಿಸುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇರಾನ್‌ ನ ಫೊರ್ಡೊವ್,ನಂತಾಂಝ್ ಹಾಗೂ ಇಸ್ಫಹಾನ್‌ ನಲ್ಲಿರುವ ಭೂಗತ ಅಣುಸ್ಥಾವರಗಳನ್ನು ಬಂಕರ್ ಬಸ್ಟರ್ ಬಾಂಬರ್‌ಗಳನ್ನು ಬಳಸಿ ನಾಶಪಡಿಸಿರುವುದಾಗಿ ಅಮೆರಿಕವು ಘೋಷಿಸಿಕೊಂಡಿತ್ತು. ಆದಾಗ್ಯೂ ಅಮೆರಿಕ ಆಡಳಿತದ ಈ ಘೋಷಣೆಯು ಆಧಾರರಹಿತವೆಂದು ಪೆಂಟಗಾನ್‌ ನ ಬೇಹುಗಾರಿಕಾ ಅಧಿಕಾರಿಗಳು ಅಂದಾಜಿಸಿದ್ದಾರೆನ್ನಲಾಗಿದೆ. ಇರಾನ್‌ ನ ಅಣುಸ್ಥಾವರಗಳಿಗೆ ಅತ್ಯಂತ ಗಂಭೀರವಾದ ಹಾನಿಯಾಗಿಲ್ಲ. ಕೇವಲ ನೆಲದ ಮಟ್ಟದಲ್ಲಿರುವ ಕಟ್ಟಡಗಳಿಗೆ ಮಾತ್ರವಷ್ಟೇ ಹಾನಿಯಾಗಿದೆ ಎಂದು ಪೆಂಟಗಾನ್ ಬೇಹುಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ.

ಇರಾನ್‌ ನ ಎರಡು ಅಣುಸ್ಥಾವರಗಳ ಪ್ರವೇಶದ್ವಾರಗಳು ನಾಶಗೊಂಡಿವೆ ಹಾಗೂ ಕೆಲವು ಕಟ್ಟಡಗಳಿಗೂ ಹಾನಿಯಾಗಿದೆ ಇಲ್ಲವೇ ನಾಶಗೊಂಡಿವೆ. ಭೂಗತ ಅಣುಸ್ಥಾವರಗಳಲ್ಲಿ ಸ್ಥಾಪಿಸಲಾಗಿರುವ ಉಪಕರಣಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೆಂಟಗಾನ್‌ ನ ಬೇಹುಗಾರಿಕಾ ಮೂಲಗಳು ತಿಳಿಸಿವೆ. ಈ ದಾಳಿಯು ಇರಾನ್‌ ನ ಅಣುಶಕ್ತಿ ಚಟುವಟಿಕೆಗಳ ಮೇಲೆ ತಾತ್ಕಾಲಿಕ ಪರಿಣಾಮವನ್ನಷ್ಟೇ ಬೀರಬಹುದು. ಆದರೆ ಮುಂದಿನ ಎರಡು ತಿಂಗಳುಗಳೊಳಗೆ ಅದು ಪೂರ್ಣಶಕ್ತಿಯೊಂದಿಗೆ ಪುನಾರಂಭಗೊಳ್ಳಲಿದೆಯೆಂದು ಬೇಹುಗಾರಿಕಾ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News