ಹಸೀನಾ ಅವರ ಢಾಕಾ ಮನೆ ಮುಟ್ಟುಗೋಲು, ಕುಟುಂಬದ ಆಸ್ತಿ ಸ್ಥಂಭನಗೊಳಿಸಿದ ಸರಕಾರ
Update: 2025-03-12 21:05 IST
PC: PTI
ಢಾಕಾ: ಢಾಕಾದ ನೆರೆಹೊರೆಯಲ್ಲಿರುವ ಧನ್ಮೋಂಡಿ ನಗರದಲ್ಲಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿವಾಸ ಹಾಗೂ ಅವರ ಕುಟುಂಬದವರಿಗೆ ಸೇರಿದ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ಢಾಕಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಜತೆಗೆ, ಹಸೀನಾ ಕುಟುಂಬಕ್ಕೆ ಸೇರಿದ 124 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆಯೂ ಸೂಚಿಸಿದೆ.
ಭ್ರಷ್ಟಾಚಾರ ನಿಗ್ರಹ ಆಯೋಗ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಢಾಕಾ ಮೆಟ್ರೊಪಾಲಿಟನ್ ಹಿರಿಯ ವಿಶೇಷ ನ್ಯಾಯಾಧೀಶ ಝಾಕಿರ್ ಹುಸೇನ್ ಘಾಲಿಬ್ ಈ ಆದೇಶ ಹೊರಡಿಸಿದ್ದಾರೆ. ಹಸೀನಾ ಅವರ ಮನೆಯ ಜತೆಗೆ, ಅವರ ಪುತ್ರ ಸಾಜಿಬ್ ವಾಝೆದ್, ಪುತ್ರಿ ಸೈಮಾ ವಾಝೆದ್, ಸಹೋದರಿ ಶೇಖ್ ರೆಹಾನಾ ಹಾಗೂ ರೆಹಾನಾ ಅವರ ಪುತ್ರಿಯರಾದ ಟುಲಿಪ್ ಸಿದ್ದಿಕ್ ಮತ್ತು ರದ್ವಾನ್ ಮುಜಿಬ್ ಸಿದ್ದಿಕ್ ನಿವಾಸಗಳನ್ನೂ ಜಫ್ತಿ ಮಾಡಲು ನ್ಯಾಯಾಲಯ ಆದೇಶಿಸಿದೆ.