ರಷ್ಯಾದಿಂದ ತೈಲ ಖರೀದಿ ಇಲ್ಲ ಎಂದು ಮೋದಿ ಭರವಸೆ ನೀಡಿದ್ದಾರೆ: ಟ್ರಂಪ್
PC | instagram.com/narendramodi
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಾಡುವ ಭಾರತದ ಮೇಲೆ ಶೇಕಡ 50ರಷ್ಟು ಹೆಚ್ಚುವರಿ ಸುಂಕ ವಿಧಿಸಿ ಒಂದು ತಿಂಗಳ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
"ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂಬ ಆಶ್ವಾಸನೆಯನ್ನು ಅವರು ನೀಡಿದ್ದಾರೆ. ನಿಮಗೆ ತಿಳಿದಿರುವಂತೆ ತಕ್ಷಣಕ್ಕೆ ಅದನ್ನು ಮಾಡಲಾಗದು. ಒಂದಷ್ಟು ಪ್ರಕ್ರಿಯೆಗಳಿರುತ್ತವೆ. ಆದರೆ ಶೀಘ್ರವೇ ಈ ವಿಧಿವಿಧಾನಗಳು ಮುಕ್ತಾಯವಾಗಲಿವೆ" ಎಂದು ಟ್ರಂಪ್ ಹೇಳಿದರು.
ಭಾರತ ವಿಶ್ವಾಸಾರ್ಹ ಪಾಲುದಾರನಾಗಿದೆಯೇ ಎಂದು ಎಎನ್ಐ ಪ್ರತಿನಿಧಿ ಕೇಳಿದ ಪ್ರಶೆಗೆ ಉತ್ತರಿಸಿದ ಟ್ರಂಪ್, "ಖಂಡಿತವಾಗಿಯೂ ಇರುತ್ತದೆ. ಅವರು (ಮೋದಿ) ನನ್ನ ಸ್ನೇಹಿತ. ನಮ್ಮ ಸಂಬಂಧ ಉತ್ತಮವಾಗಿದೆ. ಭಾರತದ ತೈಲ ಖರೀದಿ ಬಗ್ಗೆ ನನಗೆ ಸಮಾಧಾನ ಇಲ್ಲ. ಆದರೆ ರಷ್ಯಾದಿಂದ ತೈಲ ಖರೀದಿ ಮಾಡುವುದಿಲ್ಲ ಎಂಬ ಭರವಸೆಯನ್ನು ನನಗೆ ಇಂದು ನೀಡಿದ್ದಾರೆ. ಇದು ದೊಡ್ಡ ಸ್ಥಗಿತ. ಇದನ್ನೇ ಚೀನಾ ಮಾಡುವಂತಾಗಬೇಕು" ಎಂದು ಸ್ಪಷ್ಟಪಡಿಸಿದರು.
"ಅವರು ನನ್ನ ಸ್ನೇಹಿತ. ನಮ್ಮ ಸಂಬಂಧ ಉತ್ತಮವಾಗಿದೆ. ನಿಮಗೆ ತಿಳಿದಿರುವಂತೆ ಎರಡು ದಿನಗಳ ಹಿಂದಷ್ಟೇ ಅವರು ಇದನ್ನು ಹೇಳಿದ್ದಾರೆ" ಎಂದು ವಿವರಿಸಿದರು. ಓವಲ್ ಆಫೀಸ್ನಲ್ಲಿ ಎಫ್ಬಿಐ ನಿರ್ದೇಶಕ ಕಶ್ ಪಟೇಲ್ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಈ ಹಿಂದೆ ರಷ್ಯಾದಿಂದ ತೈಲ ಖರೀದಿ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, "ರಷ್ಯಾದಿಂದ ಅವರು ತೈಲ ಖರೀದಿ ಮಾಡುತ್ತಿರುವುದು ನನಗೆ ಸಮಾಧಾನ ತಂದಿಲ್ಲ. ಏಕೆಂದರೆ ರಷ್ಯಾ ಹಾಸ್ಯಾಸ್ಪದ ಯುದ್ಧ ಮುಂದುವರಿಸಿದೆ. ಹೀಗೆ ಮಾಡಿ ಬಹುತೇಕ ಸೈನಿಕರು ಸೇರಿ 15 ಲಕ್ಷ ಮಂದಿಯನ್ನು ಕಳೆದುಕೊಂಡಿದೆ. ಉಭಯ ದೇಶಗಳ ನಡುವಿನ ಯುದ್ಧ ಅನಗತ್ಯ. ಇದು ಆರಂಭವಾಗಬಾರದಿತ್ತು. ಆದರೆ ಇದು ರಷ್ಯಾ ಮೊದಲ ವಾರದಲ್ಲೇ ಗೆಲ್ಲಬಹುದಾಗಿದ್ದ ಯುದ್ಧ; ಇದೀಗ ನಾಲ್ಕನೇ ವರ್ಷ ಮುಂದುವರಿದಿದೆ ಎಂದು ವಿಶ್ಲೇಷಿಸಿದರು.