ಕೀನ್ಯಾದಲ್ಲಿ ಹೆಲಿಕಾಪ್ಟರ್ ದುರಂತ: ಈಕ್ವೆಡಾರ್ ಗುಪ್ತಚರ ಮುಖ್ಯಸ್ಥ ಸೇರಿ 7 ಮಂದಿ ಮೃತ್ಯು
Photo: x.com/the_hindu
ನೈರೋಬಿ, ಆ.20: ಮಧ್ಯ ಕೀನ್ಯಾದಲ್ಲಿ ಪ್ರವಾಸಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಈಕ್ವೆಡಾರ್ ನ ಗುಪ್ತಚರ ಮುಖ್ಯಸ್ಥ ಮೈಕೆಲ್ ಸೆನ್ಸಿ–ಕಾಂಟುಗಿ, ಅವರ ಪತ್ನಿ ಹಾಗೂ ಐವರು ಅಮೆರಿಕನ್ ನಾಗರಿಕರು ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಪೈಲಟ್ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ನೈರೋಬಿಯ ಉತ್ತರದಲ್ಲಿರುವ ಸಾಂಬುರು ಕೌಂಟಿಯಲ್ಲಿ ಬುಧವಾರ ಬೆಳಿಗ್ಗೆ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ಲೊಯಿಸಾಬಾ ವನ್ಯಜೀವಿ ಮೀಸಲು ಪ್ರದೇಶದಿಂದ ಹೊರಟಿತ್ತು ಎಂದು ಕೀನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (KCAA) ತಿಳಿಸಿದೆ.
‘ಹೆಲಿಕಾಪ್ಟರ್‌ನಲ್ಲಿ ಒಬ್ಬ ಪೈಲಟ್ ಮತ್ತು ಆರು ಪ್ರಯಾಣಿಕರಿದ್ದರು. ಯಾರೂ ಬದುಕುಳಿದಿಲ್ಲ’ ಎಂದು ವಿಮಾನ ಅಪಘಾತ ತನಿಖಾ ವಿಭಾಗದ (AAID) ನಿರ್ದೇಶಕ ಫ್ರೆಡ್ರಿಕ್ ಕಬುಂಗೆ ತಿಳಿಸಿದ್ದಾರೆ.
ಅಪಘಾತದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದುರ್ಗಮ ಭೂಪ್ರದೇಶದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಕೀನ್ಯಾ ರೆಡ್ ಕ್ರಾಸ್ ತಿಳಿಸಿದೆ. ಕತ್ತಲೆ ಮತ್ತು ನೆಲದ ಸಂಕೀರ್ಣ ಸ್ವರೂಪದಿಂದಾಗಿ ಕಾರ್ಯಾಚರಣೆಯನ್ನು ಗುರುವಾರದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಸಾಂಬುರು ಕೌಂಟಿ ಪೊಲೀಸ್ ಮುಖ್ಯಸ್ಥ ಡೇವಿಡ್ ನ್ಕೊರೊಯ್ ಹೇಳಿದ್ದಾರೆ.
ಮೃತರಲ್ಲಿ ಈಕ್ವೆಡಾರ್‌ನ ರಾಷ್ಟ್ರೀಯ ಗುಪ್ತಚರ ಕೇಂದ್ರದ ಮುಖ್ಯಸ್ಥ ಮೈಕೆಲ್ ಸೆನ್ಸಿ–ಕಾಂಟುಗಿ ಮತ್ತು ಅವರ ಪತ್ನಿ ಸ್ಟೆಫನಿ ಸೇರಿದ್ದಾರೆ ಎಂದು ಈಕ್ವೆಡಾರ್ ನ ಸಾರಿಗೆ ಸಚಿವ ರಾಬರ್ಟೊ ಲುಕ್ ತಿಳಿಸಿದ್ದಾರೆ.
42 ವರ್ಷದ ಸೆನ್ಸಿ–ಕಾಂಟುಗಿ ಅವರನ್ನು 2024ರಲ್ಲಿ ರಾಷ್ಟ್ರೀಯ ಗುಪ್ತಚರ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಮಾಜಿ ಉದ್ಯಮಿಯಾಗಿದ್ದ ಅವರು ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅವರ ಆಪ್ತರಾಗಿದ್ದರು.
ಅಪಘಾತದಲ್ಲಿ ಐವರು ಅಮೆರಿಕನ್ ನಾಗರಿಕರು ಮೃತಪಟ್ಟಿರುವುದನ್ನು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಮೃತರ ಗುರುತನ್ನು ಇಲಾಖೆ ಬಹಿರಂಗಪಡಿಸಿಲ್ಲ.
ಆದರೆ, ಫ್ಲೋರಿಡಾದ ಸ್ಪ್ಯಾನಿಷ್ ಭಾಷೆಯ ಪ್ರಸಾರ ಸಂಸ್ಥೆ ಟೆಲಿಮುಂಡೊ, ತನ್ನ ಹಿರಿಯ ವ್ಯವಸ್ಥಾಪಕರಲ್ಲೊಬ್ಬರಾದ ಜೋಸ್ ಆಲ್ಬರ್ಟೊ ಸುವಾರೆಜ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
‘ಕೀನ್ಯಾದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಜೋಸ್ ಮೃತಪಟ್ಟಿರುವ ದುರಂತ ಸುದ್ದಿಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ ’ ಎಂದು ಟೆಲಿಮುಂಡೊದ NBCUniversalನ ಸುದ್ದಿ ವಿಭಾಗದ ಅಧ್ಯಕ್ಷ ಸೀಸರ್ ಕಾಂಡೆ ಹಾಗೂ ಇತರ ಇಬ್ಬರು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಜೋಸ್ ಅಸಾಧಾರಣ ಸಹೋದ್ಯೋಗಿಯಾಗಿದ್ದರು. ತಮ್ಮ ತಂಡಗಳು, ಅವರು ಸೇವೆ ಸಲ್ಲಿಸಿದ ಸಮುದಾಯಗಳು ಹಾಗೂ ನಮ್ಮ ವಾಹಿನಿಗಳು ಜನರ ಜೀವನದಲ್ಲಿ ವಹಿಸುವ ಪ್ರಮುಖ ಪಾತ್ರದ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು’ ಎಂದು ಅವರು ಹೇಳಿದ್ದಾರೆ.
ಅಪಘಾತ ಸಂಭವಿಸಿದ ಮೌಂಟ್ ಓಲೋಲೋಕ್ವೆ ಪರ್ವತದ ಬುಡದಿಂದ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಸಾಂಬುರು ಸಮುದಾಯಕ್ಕೆ ಮೌಂಟ್ ಓಲೋಲೋಕ್ವೆ ಪವಿತ್ರ ಪರ್ವತವಾಗಿದೆ. ಅದರ ಶಿಖರ ಸಮುದ್ರಮಟ್ಟದಿಂದ 2,000 ಮೀಟರ್ ಎತ್ತರದಲ್ಲಿದೆ. ಇದು ಜನಪ್ರಿಯ ಚಾರಣ ತಾಣವಾಗಿದ್ದು, ಹಲವು ಕಂಪೆನಿಗಳು ಪ್ರವಾಸಿಗರಿಗೆ ಹೆಲಿಕಾಪ್ಟರ್ ಹಾರಾಟದ ಸೇವೆ ಒದಗಿಸುತ್ತವೆ.
ಅಪಘಾತದ ಕಾರಣ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು KCAA ತಿಳಿಸಿದೆ.
ಮಾರ್ಚ್‌ನಲ್ಲಿ ಪಶ್ಚಿಮ ಕೀನ್ಯಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಸತ್ ಸದಸ್ಯರೊಬ್ಬರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದರು.