ಇರಾನ್ ವಿರುದ್ಧ ಕಠಿಣ ಆರ್ಥಿಕ ಕ್ರಮ: ಟ್ರಂಪ್
Photo: screengrab/x.com/_InfoGram_
ವಾಷಿಂಗ್ಟನ್, ಆ.20: ಇರಾನ್ ವಿರುದ್ಧ ಅಮೆರಿಕವು ಅತ್ಯಂತ ಕಠಿಣ ಆರ್ಥಿಕ ಕ್ರಮಗಳನ್ನು ಆರಂಭಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ ಇಸ್ಲಾಮಿಕ್ ಗಣರಾಜ್ಯಕ್ಕೆ ಒಪ್ಪಂದ ಮಾಡಿಕೊಳ್ಳಲು ತಮ್ಮಷ್ಟು ದೊಡ್ಡ ಅವಕಾಶವನ್ನು ಯಾರೂ ನೀಡಿಲ್ಲ. ಆದರೆ, ಇರಾನ್ ಆ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕವು ಯಾವುದೇ ದೇಶದ ವಿರುದ್ಧ ಇದುವರೆಗೆ ಕೈಗೊಂಡಿರುವುದಕ್ಕಿಂತಲೂ ‘ಅತ್ಯಂತ ಕ್ರೂರ ಆರ್ಥಿಕ ಕಾರ್ಯಾಚರಣೆ’ಯನ್ನು ಇರಾನ್ ವಿರುದ್ಧ ಆರಂಭಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕಾರ್ಯಾಚರಣೆ ‘ಅಭೂತಪೂರ್ವ ಪ್ರಮಾಣದ ಆರ್ಥಿಕ ಯುದ್ಧ ಮತ್ತು ಪ್ರತ್ಯೇಕತೆ’ಯಾಗಿರಲಿದೆ ಎಂದು ತಿಳಿಸಿದ್ದಾರೆ.
‘ಇರಾನ್‌ನ ನೌಕಾಪಡೆ ಅಸ್ತಿತ್ವದಲ್ಲಿಲ್ಲ, ವಾಯುಪಡೆ ನಾಶವಾಗಿದೆ, ಮಿಲಿಟರಿ ಕಾರ್ಖಾನೆಗಳು ಹಾನಿಗೊಂಡಿವೆ, ಕರೆನ್ಸಿ ಮೌಲ್ಯ ಕಳೆದುಕೊಂಡಿದೆ. ದೇಶದ ಪರಿಸ್ಥಿತಿ ಅತ್ಯಂತ ದುರ್ಬಲವಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್‌ಗೆ ನೆರವು ನೀಡುವವರಿಗೂ ಎಚ್ಚರಿಕೆ
ಇರಾನ್‌ಗೆ ಯಾವುದೇ ರೀತಿಯ ಆರ್ಥಿಕ ನೆರವು ಒದಗಿಸುವ ದೇಶಗಳು ಮತ್ತು ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.
‘ಹಣಕಾಸು ಸಂಸ್ಥೆಗಳು, ವ್ಯವಹಾರಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಘಟಕಗಳ ಮೂಲಕ ಇರಾನ್‌ಗೆ ಯಾವುದೇ ರೀತಿಯ ಜೀವಸೆಲೆ ಒದಗಿಸುವ ಯಾವುದೇ ದೇಶವು ಹೆಚ್ಚಿನ ಆರ್ಥಿಕ ಪರಿಣಾಮಗಳನ್ನು ಎದುರಿಸಲಿದೆ’ ಎಂದು ಅವರು ಹೇಳಿದ್ದಾರೆ.
‘ತೈಲ ಕಳ್ಳಸಾಗಣೆ, ವಿನಿಮಯ ಮಾರ್ಗಗಳು, ನಗದು ವರ್ಗಾವಣೆ, ವಿನಿಮಯ ಕೇಂದ್ರಗಳು, ಹಡಗು ನೋಂದಣಿಗಳು, ನಟಲಿ ಕಂಪೆನಿಗಳು—ಇವೆಲ್ಲವನ್ನೂ ಈಗಲೇ ನಿಲ್ಲಿಸಬೇಕು. ನೀವು ಯಾರೆಂದು ನಿಮಗೆ ತಿಳಿದಿದೆ’ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
‘ಆರ್ಥಿಕ ಡಿ-ಡೇ’
ಈ ಕಾರ್ಯಾಚರಣೆಯನ್ನು ‘ಆರ್ಥಿಕ ಡಿ-ಡೇ’ ಎಂದು ಬಣ್ಣಿಸಿರುವ ಟ್ರಂಪ್, ಇರಾನ್‌ನ ಬೆದರಿಕೆಯನ್ನು ಪ್ರತ್ಯೇಕಿಸಿ ಸೋಲಿಸಲು ಅಮೆರಿಕದೊಂದಿಗೆ ನಿಲ್ಲುವಂತೆ ಮಿತ್ರರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
‘ಈ ಹುಚ್ಚರು ಹಗ್ಗದ ಮೇಲೆ ಇದ್ದಾರೆ. ಈ ಐತಿಹಾಸಿಕ ಕ್ರಮಗಳು ವಿಶ್ವಾದ್ಯಂತ ಭಯೋತ್ಪಾದನೆಯನ್ನು ಹರಡುವ ಅವರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು’ ಎಂದು ಟ್ರಂಪ್ ಹೇಳಿದ್ದಾರೆ.