ಇರಾನ್ ಮೇಲಿನ ಅಮೆರಿಕದ ದಾಳಿಯು ಹುಚ್ಚುತನದ ಪರಮಾವಧಿ: ಹಿಜ್ಬುಲ್ಲಾ ಖಂಡನೆ
Photo:NDTV
ಬೈರುತ್: ಇರಾನ್ ನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ದಾಳಿಯು ಅನಾಗರಿಕ ಮತ್ತು ವಿಶ್ವಾಸಘಾತುಕವಾಗಿದ್ದು, ಇದು ಹುಚ್ಚುತನದ ಪರಮಾವಧಿ ಎಂದು ಹಿಜ್ಬುಲ್ಲಾ ಖಂಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಹಿಜ್ಬುಲ್ಲಾ, ಇರಾನಿನ ಪರಮಾಣು ನೆಲೆಗಳ ಮೇಲೆ ಅಮೆರಿಕವು ಮಾಡಿರುವ ದಾಳಿಯು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ಮಧ್ಯ ಪ್ರಾಚ್ಯದ ಮೇಲಿನ ದಾಳಿಯನ್ನು ನಿಲ್ಲಿಸದಿದ್ದರೆ ಈ ಪ್ರದೇಶವು ಜಗತ್ತನ್ನೇ ಅವ್ಯವಸ್ಥೆಗೆ ಎಳೆಯಬಹುದು ಎಂದು ಲೆಬನಾನಿನ ಗುಂಪಾದ ಹಿಜ್ಬುಲ್ಲಾ ಎಚ್ಚರಿಸಿದೆ.
ಅಮೆರಿಕ ನಡೆಸಿರುವ ದಾಳಿಯು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ದೊಡ್ಡ ಅಪಾಯ ಎಂದೇ ಪರಿಗಣಿಸಲಾಗಿದೆ. ಇದು ಅಮೆರಿಕದ ನಿಜವಾದ ಮುಖವನ್ನು ಬಹಿರಂಗಪಡಿಸುತ್ತದೆ. ಅಮೆರಿಕವೇ ಭಯೋತ್ಪಾದನೆಯ ಅಧಿಕೃತ ಪ್ರಾಯೋಜಕನಾಗಿ ಕಾರ್ಯನಿರ್ವಹಿಸುತ್ತಿದೆ. ಇರಾನ್ ನ ಕ್ಷಿಪಣಿ ದಾಳಿಯನ್ನು ತಡೆಯುವಲ್ಲಿ ಇಸ್ರೇಲ್ ನ ವೈಫಲ್ಯವನ್ನು ಈ ಮೂಲಕ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಹಿಜ್ಬುಲ್ಲಾ ಆರೋಪಿಸಿದೆ.
ಟ್ರಂಪ್ ಸ್ವತಂತ್ರ ರಾಷ್ಟ್ರಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಹಿಜ್ಬುಲ್ಲಾ, ಅಮೆರಿಕ ನಡೆಸಿರುವ ದಾಳಿಯು ಇರಾನ್‌ಗೆ ತನ್ನ ಭೂಮಿ, ಜನರು ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಸಂಪೂರ್ಣ ಹಕ್ಕನ್ನು ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.