×
Ad

ಸೌದಿ ಅರೇಬಿಯಾ | ತಿರುವುಗಳಿಲ್ಲದ ವಿಶ್ವದ ಅತಿ ಉದ್ದನೆಯ ಹೆದ್ದಾರಿ ನಿರ್ಮಾಣ

Update: 2025-05-07 22:26 IST

Photo: X/@TheGlobal_Index

ರಿಯಾದ್: ಆಸ್ಟ್ರೇಲಿಯಾದ ಐರ್ ಹೆದ್ದಾರಿಯನ್ನೇ ಹಿಂದಿಕ್ಕಿರುವ ಸೌದಿ ಅರೇಬಿಯಾದ ರಾಷ್ಟ್ರೀಯ ಹೆದ್ದಾರಿ 10, ವಿಶ್ವದ ಅತಿ ಉದ್ದನೆಯ ನೇರ ಹೆದ್ದಾರಿಯಾಗಿ ಹೊರ ಹೊಮ್ಮಿದೆ ಎಂದು ಗಿನ್ನಿಸ್ ವಿಶ್ವ ದಾಖಲೆಗಳ ಸಂಸ್ಥೆ ಹೇಳಿದೆ. ಈ ಸಾಧನೆಯು ಸಾರಿಗೆ ಮೂಲಸೌಕರ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಯಾವುದೇ ಗೋಚರತೆಯ ತೊಡಕಿಲ್ಲದೆ ಭಾರಿ ಪ್ರಮಾಣದ ದೂರವನ್ನು ಕ್ರಮಿಸುವ ಪ್ರಯಾಣಿಕರಿಗೆ ಸರಿಸಾಟಿಯಿಲ್ಲದ ಪ್ರಯಾಣಾನುಭವವನ್ನು ಒದಗಿಸಲಿದೆ.

ಈ 256 ಕಿಮೀ (159 ಮೈಲುಗಳು) ದೂರದ ಈ ಡಾಂಬರು ರಸ್ತೆಯು ಎಂಪ್ಟಿ ಕ್ವಾರ್ಟರ್ ಎಂದೇ ಹೆಸರಾಗಿರುವ ರಬ್ ಅಲ್-ಖಲಿ ಮರಳುಗಾಡಿನ ಮೂಲಕ ಹಾದು ಹೋಗಿದೆ. ಅತಿ ದೊಡ್ಡ ಮರಳುಗಾಡಾದ ರಬ್ ಅಲಿ-ಖಲಿ ಮರಳುಗಾಡಿನ ನಡುವೆ ಯಾವುದೇ ಬಲ ಅಥವಾ ಎಡ ತಿರುವುಗಳಿಲ್ಲದೆ ಅಥವಾ ಯಾವುದೇ ಬಗೆಯ ಪ್ರಶಂಸಾರ್ಹ ಏರುಪೇರುಗಳಿಲ್ಲದೆ ಈ ಹೆದ್ದಾರಿ ಹಾದು ಹೋಗಿದೆ. ಈ ನಿಖರ ನೇರ ಹೆದ್ದಾರಿಯಲ್ಲಿನ ಚಾಲನಾ ಅವಧಿಯು ಸುಮಾರು ಎರಡು ಗಂಟೆ ಎಂದು ಅಂದಾಜಿಸಲಾಗಿದೆ.

ಮೂಲತಃ ದೊರೆ ಫಹದ್ ಗಾಗಿನ ಖಾಸಗಿ ರಸ್ತೆ ಎಂದು ನಿರ್ಮಾಣವಾಗಿರುವ ಈ ಹೆದ್ದಾರಿಯು, ತೈಲ ಮತ್ತು ಅನಿಲ ನಿಕ್ಷೇಪಗಳಿಗೆ ಹೆಸರುವಾಸಿಯಾಗಿರುವ ಹರದ್ ನಗರದಿಂದ, ಯುಎಇ ಗಡಿ ಬಳಿಯಿರುವ ಅಲ್ ಬತಾ ನಗರದವರೆಗೆ ಹಾದು ಹೋಗುತ್ತದೆ ಎಂದು Arab News ಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮುನ್ನ, ಪಶ್ಚಿಮ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಸ್ಟ್ರೇಲಿಯವನ್ನು ಸಂಪರ್ಕಿಸುವ 146 ಕಿಮೀ ದೂರದ ಐರ್ ಹೆದ್ದಾರಿಯು ವಿಶ್ವದ ಅತಿ ಉದ್ದನೆಯ ನೇರ ರಸ್ತೆ ಎಂಬ ದಾಖಲೆಯನ್ನು ಹೊಂದಿತ್ತು. ಸೌದಿ ಅರೇಬಿಯಾದ ರಾಷ್ಟ್ರೀಯ ಹೆದ್ದಾರಿ 10ರ ಮೇಲೆ ಚಾಲನೆ ಮಾಡುವಾಗ, ಸ್ವಯಂನಿಯಂತ್ರಣ ಮಾಡಿಕೊಳ್ಳಬೇಕಾದ ಅಗತ್ಯ ಹೆಚ್ಚಿದೆ. ಆತ್ಮತೃಪ್ತಿಗಾಗಿ ಈ ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡುವುದರ ವಿರುದ್ಧ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ. Dangerousroads.org ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಹೆದ್ದಾರಿಯಲ್ಲಿ ತಿರುವುಗಳಿಲ್ಲದ ಹೊರತಾಗಿಯೂ, ಡಿಕ್ಕಿ ಸಂಭವಿಸುವುದು ಅಸಂಭವವೇನಲ್ಲ ಎಂದು ಹೇಳಲಾಗಿದೆ. ಈ ಮರಳುಗಾಡಿನ ಭೌಗೋಳಿಕತೆ ತನ್ನದೇ ಆದ ಅಪಾಯಗಳನ್ನು ಹೊಂದಿದ್ದು, ವಾಹನಗಳು ಬೀದಿ ಒಂಟೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಾದ ಅಗತ್ಯತೆ ಇದೆ ಎಂದೂ ಹೇಳಲಾಗಿದೆ.

ಇಂತಹ ಉದ್ದನೆಯ ಹಾಗೂ ನೇರ ರಸ್ತೆಯ ನಿರ್ಮಾಣದ ಹಿಂದಿನ ನಿಖರ ಕಾರಣವೇನು ಎಂಬುದು ಈವರೆಗೆ ತಿಳಿದು ಬಂದಿಲ್ಲವಾದರೂ, ಈ ಹೆದ್ದಾರಿಯು ಸೌದಿ ಅರೇಬಿಯಾ ದೊರೆಯ ಪಾಲಿಗೆ ಅತಿ ವೇಗದ ರಸ್ತೆಯಾಗಿ ಬಳಕೆಯಾಗಲಿದೆ ಎನ್ನಲಾಗಿದೆ. ಈ ಹೆದ್ದಾರಿಯ ಮೂಲವನ್ನು ಹೊರತುಪಡಿಸಿಯೂ, ಸೌದಿ ಅರೇಬಿಯಾದ 10ನೇ ರಾಷ್ಟ್ರೀಯ ಹೆದ್ದಾರಿಯು ಆಧುನಿಕ ಎಂಜಿನಿರಿಂಗ್ ಸಾಮರ್ಥ್ಯಕ್ಕೆ ಪುರಾವೆಯಾಗಿ ಹೊರಹೊಮ್ಮಿದ್ದು, ಆ ಮೂಲಕ, ನೈಜ ವಿಶಿಷ್ಟ ಚಾಲನಾ ಅನುಭವವನ್ನು ನೀಡುತ್ತದೆ. ಹೀಗಿದ್ದರೂ, ಈ ಹೆದ್ದಾರಿಯಲ್ಲಿ ವಾಹನ ಚಲಾಯಿಸುವ ಚಾಲಕರು ಆರೋಗ್ಯಕರ ಚಾಲನಾ ಜಾಗರೂಕತೆಯನ್ನು ಹೊಂದಿರಲೇಬೇಕಾದ ಅಗತ್ಯವಿದೆ ಎನ್ನಲಾಗಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News