×
Ad

ಗಾಝಾ: ಮಾನವೀಯ ನೆರವಿನ ಸಾಮಾಗ್ರಿಗಳ ಪೂರೈಕೆ ಆರಂಭ

Update: 2023-10-21 22:54 IST

Photo: twitter.com/akhbarpoint

ಕೈರೋ: ಸಂಘರ್ಷ ಪೀಡಿತ ಹಾಗೂ ಇಸ್ರೇಲ್‌ನಿಂದ ದಿಗ್ಬಂಧನಕ್ಕೊಳಗಾಗಿರುವ ಗಾಝಾಪಟ್ಟಿಗೆ ಮಾನವೀಯ ನೆರವು ಸಾಮಾಗ್ರಿಗಳನ್ನು ಹೊತ್ತ ಟ್ರಕ್‌ಗಳು ಈಜಿಪ್ಟ್‌ನಿಂದ ರಫಾ ಗಡಿ ಮಾರ್ಗವಾಗಿ ಆಗಮಿಸಿವೆ ಎಂದು ಈಜಿಪ್ಟ್‌ನ ರೆಡ್‌ಕ್ರಿಸೆಂಟ್‌ನ ಅಧಿಕಾರಿ ಹಾಗೂ ಭದ್ರತಾ ಮೂಲಗಳು ತಿಳಿಸಿವೆ.

ಇಸ್ರೇಲ್ ಹಾಗೂ ಹಮಾಸ್ ನಡುವೆ ಭುಗಿಲೆದ್ದಿರುವ ಸಮರದ 15 ದಿನವಾದ ಶನಿವಾರ ಹಲವಾರು ಟ್ರಕ್‌ಗಳು ಗಾಝಾವನ್ನು ಪ್ರವೇಶಿಸುತ್ತಿರುವ ದೃಶ್ಯಗಳನ್ನು ಈಜಿಪ್ಟ್‌ನ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯೊಂದು ಪ್ರಸಾರ ಮಾಡಿದೆ.

ಆಕ್ಟೋಬರ್ 7ರಂದು ಹಮಾಸ್ ಹೋರಾಟಗಾರರು ತನ್ನ ನೆಲದ ಮೇಲೆ ಹಠಾತ್ ದಾಳಿ ನಡೆಸಿದ ಬಳಿಕ ಗಾಝಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿರುವ ಇಸ್ರೇಲ್ ಅಲ್ಲಿಗೆ ನೀರು, ವಿದ್ಯುತ್, ಇಂಧನ ಹಾಗೂ ಆಹಾರ ಪೂರೈಕೆಯನ್ನು ಕಡಿತಗೊಳಿಸಿದೆ ಹಾಗೂ ಅವಶ್ಯಕ ವಸ್ತುಗಳ ತೀವ್ರ ಅಭಾವವನ್ನು ಸಷ್ಟಿಸಿದೆ.

ರಫಾವು ಗಾಝಾವನ್ನು ತಲುಪಲು ಇಸ್ರೇಲ್‌ನ ನಿಯಂತ್ರಣದಲ್ಲಿರದ ಏಕೈಕ ದಾರಿಯಾಗಿದೆ. ಗಾಝಾಕ್ಕೆ ಮಾನವೀಯ ಅವಶ್ಯಕತೆಯ ಸಾಮಾಗ್ರಿಗಳ ಪೂರೈಕೆಗೆ ಅವಕಾಶ ನೀಡುವಂತೆ ಅಮೆರಿkವು ಮನವಿ ಮಾಡಿ ಬಳಿಕ ಇಸ್ರೇಲ್ ತನ್ನ ಸಮ್ಮತಿಯನ್ನು ನೀಡಿದೆ.

ಗಾಝಾಕ್ಕೆ ವಿಶ್ವಸಂಸ್ಥೆಯ ಏಜೆನ್ಸಿಗಳ ವಿವಿಧ ನೆರವು ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಹೊಣೆಹೊತ್ತಿರುವ ರೆಡ್ ಕ್ರಿಸೆಂಟ್‌ನ 20 ಟ್ರಕ್‌ಗಳು ಈಜಿಪ್ಟ್ ಟರ್ಮಿನಲ್ ಅನ್ನು ಪ್ರವೇಶಿಸಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆಯ ಪ್ರತಿನಿಧಿಯೊಬ್ಬರು ವರದಿ ಮಾಡಿದ್ದಾರೆ.

ಇತ್ತ ಫೆಲೆಸ್ತೀನ್ ಕಡೆಯಿಂದ 36 ಖಾಲಿ ಟ್ರಕ್‌ಗಳು ಈಜಿಪ್ಶಿಯನ್ ಟರ್ಮಿನಲ್ ಪ್ರವೇಶಿಸಿರುವುದಾಗಿ ಎಎಫ್‌ಪಿ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಶನಿವಾರ ಈಜಿಪ್ಟ್ ಗಡಿಪ್ರದೇಶಕ್ಕೆ ಭೇಟಿ ಗಾಝಾಕ್ಕೆ ನೆರವು ಪೂರೈಕೆಯ ಕುರಿತಾದ ಪೂರ್ವಸಿದ್ಧತಾಕ್ರಮಗಳನ್ನು ಪರಿಶೀಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News